ಮಂಗಳೂರು(ಬಂಟ್ವಾಳ): ಸರಕಾರಿ ಇಲಾಖೆಗೆ ಸೇರಿದ ವಾಹನವೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿರುವುದಾಗಿ ಟ್ರಾಫಿಕ್ ಎಸ್.ಐ.ಸುತೇಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪುತ್ತೂರು ಅರಣ್ಯ ಇಲಾಖೆಗೆ ಸೇರಿದ ವಾಹನ ಇದಾಗಿದ್ದು, ಬಿಸಿರೋಡು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದು, ರಾತ್ರಿ 8.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮೃತಪಟ್ಟ ಪಾದಚಾರಿಯ ಬಗ್ಗೆ ವಿವರ ಲಭ್ಯವಾಗಿಲ್ಲ. ಮಂಗಳೂರು ಪಡೀಲ್ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ್ದಾರೆ. ಪುತ್ತೂರು ಅರಣ್ಯ ಇಲಾಖೆಯ ಆರ್.ಎಫ್.ಕಿರಣ್ ಎಂಬವರು ಸಂಚಾರ ಮಾಡುತ್ತಿದ್ಧ ಬೊಲೆರೋ ವಾಹನ ಪರಂಗಿಪೇಟೆಯ ರಿಕ್ಷಾ ಪಾರ್ಕ್ ನ ಎದುರು ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅರಣ್ಯ ಇಲಾಖೆಯ ವಾಹನ ಅಪಘಾತ ಸಂಭವಿಸಿದ ಕೂಡಲೇ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ರಕ್ತಸಿಕ್ತವಾಗಿ ಒದ್ದಾಡುತ್ತಿದ್ದಾತನನ್ನು ಅಲ್ಲೇ ಇದ್ದ ರಿಕ್ಷಾ ಚಾಲಕರಿಬ್ಬರು ಅದೇ ಸರಕಾರಿ ಇಲಾಖೆಯ ವಾಹನದಲ್ಲಿ ಹಾಕಿಕೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯನ್ನು ಬದುಕಿಸುವ ಪ್ರಯತ್ನ ಫಲನೀಡಲಿಲ್ಲ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅನಾಮಿಕನ ಜೀವ ಉಳಿಸುವ ನಿಟ್ಟಿನಲ್ಲಿ ಇಲ್ಲಿನ ನಿವಾಸಿಗಳಿಬ್ಬರು ಸರಕಾರಿ ವಾಹನದಲ್ಲಿ ಆಸ್ಪತ್ರೆಗೆ ಸೇರಿಸಿ ವಾಪಾಸು ಬರುತ್ತಿದ್ದ ವೇಳೆ ವಳಚ್ಚಿಲ ಎಂಬಲ್ಲಿಗೆ ಇಲಾಖೆಯ ಚಾಲಕ ಆಗಮಿಸಿ ವಾಹನದೊಳಗಿದ್ದ ಕಡತ ಮತ್ತು ಇತರ ವಸ್ತುಗಳನ್ನು ಪಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.