ದಕ್ಷಿಣ ಕನ್ನಡದ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿರುವ ಎನ್‌ಐಎ ಅಧಿಕಾರಿಗಳು

ಮಂಗಳೂರು(ಬೆಂಗಳೂರು): ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು (ಎನ್‌ಐಎ) ಮಂಗಳವಾರ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ಸೇರಿ ಮೂವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಸೈಯದ್ ಖೈಲ್, ಮೂಲತಃ ಕೇರಳ ಇಡುಕ್ಕಿ ನಿವಾಸಿ ಪ್ರಸ್ತುತ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದಲ್ಲಿರುವ ಬಿಜು ಅಬ್ರಹಾಂ ಹಾಗೂ ಮಂಗಳೂರಿನ ಅತ್ತಾವರದ ನಬೀದ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ನಾಸಿರ್ ಖಾನ್ ಎಂಬಾತನಿಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿಗಳ ಬಗ್ಗೆ ಪೂರಕ ದಾಖಲೆಗಳನ್ನು ಸಂಗ್ರಹಿಸಿದ್ದ ಅಧಿಕಾರಿಗಳು, ಎರಡು ತಂಡಗಳಾಗಿ ಮಂಗಳೂರು ಮತ್ತು ಅಂಕೋಲಾಕ್ಕೆ ಭೇಟಿ ನೀಡಿದ್ದರು. ಎನ್‌ಐಎ ಅಧಿಕಾರಿಗಳು ಮಂಗಳವಾರ ಏಕಕಾಲಕ್ಕೆ ಕರ್ನಾಟಕ, ತಮಿಳುನಾಡು, ತೆಲಂಗಾಣ, ಪಂಜಾಬ್, ಗುಜರಾತ್ ಮತ್ತು ಪಶ್ಚಿಮ ಬಂಗಾಳದ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ 25 ಮೊಬೈಲ್ ಫೋನ್‌ಗಳು, 6 ಲ್ಯಾಪ್‌ಟಾಪ್‌ಗಳು ಮತ್ತು 4 ಹಾರ್ಡ್​ ಡಿಸ್ಕ್​​ಗಳು, ವಿವಿಧ ದಾಖಲೆಗಳು ಮತ್ತು ನಗದು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಜೈಲಿನಲ್ಲಿರುವ ಖೈದಿಗಳಲ್ಲಿ ಉಗ್ರವಾದ ಬೆಳೆಸುವುದು, ಆತ್ಮಾಹುತಿ ದಾಳಿಗೆ ಪ್ರಚೋದನೆ ನೀಡುವುದು ಸೇರಿದಂತೆ ಹಲವು ಉಗ್ರ ಚಟುವಟಿಕೆಗಳಿಗೆ ಪಿತೂರಿ ನಡೆಸಿರುವ ಕುರಿತು ಮೂಲಗಳಿಂದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಎನ್‌ಐಎ ದಾಳಿ ನಡೆಸಿದೆ ಎನ್ನಲಾಗಿದೆ.

 

 

LEAVE A REPLY

Please enter your comment!
Please enter your name here