ಮಂಗಳೂರು(ಬೆಳಗಾವಿ): ದೇಶದಲ್ಲಿ ಬಿಜೆಪಿಗೆ 400 ಸೀಟು ಬಂದರೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬರುತ್ತೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ರಾಜ್ಯದಲ್ಲೂ ನಮ್ಮ ಸರ್ಕಾರವೇ ಇರುತ್ತೆ. ಆಗ ನೋಡಿ ಮಾರಿ ಹಬ್ಬ ಆರಂಭ ಆಗುತ್ತದೆ. ಅವಾಗ ನಮ್ಮ ತಲ್ವಾರಿನ ತುದಿ ಹೇಗೆ ಜಳಪಿಸುತ್ತೆ ನೋಡಿ ಎಂದು ಸಂಸದ ಅನಂತಕುಮಾರ್ ಹೆಗಡೆ ಮತ್ತೆ ಪ್ರಚೋದಾತ್ಮಕ ಹೇಳಿಕೆ ನೀಡಿದ್ದಾರೆ. ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸರ್ಕಾರ ಪತನವಾಗಲಿದೆ ಎಂದು ಹೇಳಿದ್ದಾರೆ.
ಅದಕ್ಕಾಗಿ ಬಿಜೆಪಿ ನಿಮ್ಮಲ್ಲಿ ವಿನಂತಿ ಮಾಡುತ್ತೆ ಪ್ರತಿಯೊಂದು ಓಟು ಮಹತ್ವವಿದೆ. ಈ ಹಿಂದೆ ಸರ್ಕಾರ ಕೇವಲ ಒಂದು ಮತದ ಅಂತರದಿಂದ ಸೋಲಾಗಿ ವಾಜಪೇಯಿ ಪ್ರಧಾನಿ ಸ್ಥಾನದಿಂದ ಕೆಳಗಿಳಿದರು. ಬರುವ ಎರಡು ತಿಂಗಳಲ್ಲಿ ಚುನಾವಣೆ ಪ್ರಕ್ರಿಯೆ ಮುಗಿದು ಹೋಗಿರುತ್ತೆ. ಐದರಿಂದ ಹತ್ತು ದಿನಗಳ ಅವಧಿಯಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುತ್ತೆ. ಏಪ್ರಿಲ್ ಕೊನೆ ವಾರದಲ್ಲಿ ಚುನಾವಣೆ ಮುಗಿಯುತ್ತೆ ಅಲ್ಲಿಯವರೆಗೆ ನಾವು ಕೆಲಸ ಮಾಡಬೇಕಿದೆ. ಎಲ್ಲರೂ ಪ್ರಚಾರ ಮಾಡಬೇಕು ಅಂತಿಲ್ಲ, ಹೊಸಬರಿಗೆ ಮೋದಿ ಬಗ್ಗೆ ಹೇಳಬೇಕು. ಮತ್ತೊಮ್ಮೆ ಮೋದಿಗೆ ಅವಕಾಶ ಕೊಡಬೇಕೆಂದು ಹೆಗಡೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಹರಾಜಾಗುತ್ತಿದೆ. 1 ವರ್ಷದಲ್ಲಿ ಸಿದ್ದರಾಮಯ್ಯ ಸರ್ಕಾರ ಹರಾಜಾಗಿದೆ. ವೇತನ ಕೊಡುವುದಕ್ಕೂ ಸರ್ಕಾರದ ಬಳಿ ಹಣ ಇಲ್ಲ. ಮನೆಯಲ್ಲಿ ಯಾರಾದರೂ ಸರ್ಕಾರಿ ನೌಕರರಿದ್ದರೆ ಕೇಳಿ ಸಂಬಳದಲ್ಲೂ ವ್ಯತ್ಯಯ ಆಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಪ್ರಧಾನಿ ಮೋದಿ ಗ್ಯಾರಂಟಿ ಕಳೆದ ಹತ್ತು ವರ್ಷಗಳಿಂದ ಜಾರಿಯಲ್ಲಿದೆ. ದಿನದಿಂದ ದಿನಕ್ಕೆ ಭಾರತ ದೇಶ ಗಟ್ಟಿಯಾಗುತ್ತಿದೆ, ದೇಶ ಸಾಧನೆಯ ಕಡೆ ಹೊರಟಿದೆ. ನಾವೇನೂ ಹೇಳಿದ್ದೇವೆ ಅದನ್ನ ಮಾಡಿ ತೋರಿಸಿದ್ದೇವೆ. ಕಾಶ್ಮೀರ, ರಾಮಮಂದಿರ, ಮುಂದಿನ ದಿನಗಳಲ್ಲಿ ಮಥುರಾ ಕಾಶಿ ವಿಶ್ವನಾಥ ಇರಬಹುದು. ಇನ್ನು ಕೆಲವು ದೇವಾಲಗಳು ಇವತ್ತಲ್ಲ ನಾಳೆ ಹಿಂದುಗಳ ಸುಪರ್ದಿಗೆ ಬರುತ್ತವೆ. ಎಲ್ಲವೂ ಯಾವಾಗ ಸಾಧ್ಯ ಅಂದರೆ ಕೇಂದ್ರದಲ್ಲಿ ಮೋದಿ ಸರ್ಕಾರದ ಬಂದಾಗ ಎಂದರು. ಇದುವರೆಗೆ ಕಾಂಗ್ರೆಸ್ನಿಂದ ಯಾರು ನಿಲ್ಲುತ್ತಾರೆ ಗೊತ್ತಿಲ್ಲ, ಆದರೆ ವದಂತಿ ಇದೆ. ಖಾನಾಪುರ ಮತಕ್ಷೇತ್ರದಲ್ಲಿ ರಿಜೆಕ್ಟ್ ಮೆಟೀರಿಯಲ್ ಲೋಕಸಭಾ ಕ್ಯಾಂಡಿಡೆಟ್ ಆಗಲಿದ್ದಾರಂತೆ. ಪರೋಕ್ಷವಾಗಿ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ವಿರುದ್ಧ ವಾಗ್ದಾಳಿ ಮಾಡಿದರು. ಇಲ್ಲಿ ರಿಜೆಕ್ಟ್ ಆಗಿರುವ ಕ್ಯಾಂಡಿಡೇಟ್ ಮೆಟಿರಿಯಲ್ ಲೋಕಸಭೆ ನಿಲ್ಲಲಿದ್ದಾರಂತೆ. ಅವರಿಗೆ ಹೇಗೆ ಉತ್ತರ ಕೊಡಬೇಕು ಅನೋದು ನಿಮಗೆ ಗೊತ್ತಿದೆ. ಕ್ಷೇತ್ರದ ಜನರು ಬಹಳ ಬುದ್ದಿವಂತರಿದ್ದಾರೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.