ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ-ತೀವ್ರಗೊಂಡ ತನಿಖೆ, ಶಂಕಿತ ವಶಕ್ಕೆ

ಮಂಗಳೂರು(ಬೆಂಗಳೂರು): ‘ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದಾನೆ’ ಎಂಬ ಅನುಮಾನದ ಮೇರೆಗೆ ಶಂಕಿತ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್‌ನನ್ನು (26) ವಶಕ್ಕೆ ಪಡೆದಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು, ಬಾಂಬ್‌ ಸ್ಪೋಟ ಆರೋಪಿ ಪತ್ತೆಗೆ ವಿಚಾರಣೆ ತೀವ್ರಗೊಳಿಸಿದ್ದಾರೆ.

‘ಬಳ್ಳಾರಿ ಕೌಲ್ ಬಜಾರ್‌ನ ಮಿನಾಜ್‌, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ ಕಾರ್ಯಕರ್ತ. ಇಸ್ಲಾಮಿಕ್ ಸ್ಟೇಟ್ ಉಗ್ರರ ಜೊತೆ ಒಡನಾಟ ಇಟ್ಟುಕೊಂಡಿದ್ದು, ದೇಶದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ. 2023ರ ಡಿಸೆಂಬರ್ 18ರಂದು ಎನ್‌ಐಎ ಅಧಿಕಾರಿಗಳು ಮಿನಾಜ್‌ನನ್ನು ಬಂಧಿಸಿದ್ದರು. ಅಂದಿನಿಂದ ಈತ, ಕೇಂದ್ರ ಕಾರಾಗೃಹದಲ್ಲಿದ್ದ’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

ಕೆಫೆ ಬಾಂಬ್ ಸ್ಫೋಟದ ಬಗ್ಗೆ ಹಲವು ಮಾಹಿತಿ ಸಂಗ್ರಹಿಸಿರುವ ಎನ್‌ಐಎ ಅಧಿಕಾರಿಗಳು, ಮಿನಾಜ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ದೊರೆತ ಕೆಲ ಮಾಹಿತಿ ಆಧಾರದಲ್ಲಿ, ಮಿನಾಜ್‌ನನ್ನು ಬಾಡಿ ವಾರಂಟ್ ಮೂಲಕ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿರುವ ನ್ಯಾಯಾಲಯ, ಮಿನಾಜ್‌ನನ್ನು ಮಾರ್ಚ್ 9ರವರೆಗೆ ಕಸ್ಟಡಿಗೆ ಒಪ್ಪಿಸಿದೆ. ಬುಧವಾರ (ಮಾರ್ಚ್ 6) ಮಿನಾಜ್‌ನನ್ನು ಕಸ್ಟಡಿಗೆ ಪಡೆದಿರುವ ಎನ್‌ಐಎ ಅಧಿಕಾರಿಗಳು, ಮಾಹಿತಿ ಕಲೆಹಾಕುತ್ತಿದ್ದಾರೆ. ಸ್ಫೋಟದಲ್ಲಿ ಈತನ ಪಾತ್ರವೇನು? ಬಾಂಬ್‌ ಇಟ್ಟವನಿಗೂ ಈತನಿಗೂ ಏನಾದರೂ ಸಂಬಂಧವಿದೆಯಾ ‌ಎಂಬುದು ವಿಚಾರಣೆಯಿಂದ ತಿಳಿಯಬೇಕಿದೆ ಎಂದು ಮೂಲಗಳು ಹೇಳಿವೆ.

ಕೆಫೆಯಲ್ಲಿ ಬಾಂಬ್‌ ಇರಿಸಿದ್ದ ಶಂಕಿತ, ಬಸ್‌ನಲ್ಲಿ ತುಮಕೂರು, ಬಳ್ಳಾರಿ ಸೇರಿದಂತೆ ಹಲವು ನಗರಗಳಲ್ಲಿ ಸುತ್ತಾಡಿದ್ದಾನೆ. ತನಿಖಾ ಸಂಸ್ಥೆಗಳಲ್ಲಿ ಗೊಂದಲ ಮೂಡಿಸಲು ಶಂಕಿತ ಈ ರೀತಿ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಶಂಕಿತನ ಬಗ್ಗೆಯೂ ಸುಳಿವು ಸಿಕ್ಕಿದ್ದು, ಈ ಆಯಾಮದಲ್ಲೂ ವಿಶೇಷ ತಂಡ ತನಿಖೆ ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ. ಶಂಕಿತ ಉಗ್ರ ಮಿನಾಜ್, ಬಳ್ಳಾರಿ ಕೌಲ್‌ಬಜಾರ್‌ನಲ್ಲಿ ಬಟ್ಟೆ ಮಾರಾಟ ಮಳಿಗೆ ಇಟ್ಟುಕೊಂಡಿದ್ದ. ಪಿಎಫ್‌ಐ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಈತ, ಸ್ಥಳೀಯ ಮುಖಂಡರ ಜೊತೆ ಉತ್ತಮ ಒಡನಾಟ ಹೊಂದಿದ್ದ ಎಂದು ಮೂಲಗಳು ತಿಳಿಸಿವೆ.

ಮಿನಾಜ್‌ ಹಾಗೂ ಸಹಚರರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಎನ್‌ಐಎ ಅಧಿಕಾರಿಗಳು, ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ದೆಹಲಿಯ 19 ಸ್ಥಳಗಳ ಮೇಲೆ 2023ರ ಡಿಸೆಂಬರ್ 18ರಂದು ದಾಳಿ ಮಾಡಿದ್ದರು. ಮಿನಾಜ್ ಸೇರಿ 8 ಶಂಕಿತ ಉಗ್ರರನ್ನು ಬಂಧಿಸಿದ್ದರು ಎಂದು ತನಿಖಾ ಸಂಸ್ಥೆ ಮೂಲಗಳು ತಿಳಿಸಿವೆ.  ಕಚ್ಚಾ ಬಾಂಬ್ ತಯಾರಿಸಲು ಶಂಕಿತರು ಸಂಗ್ರಹಿಸಿಟ್ಟುಕೊಂಡಿದ್ದ ಸಲ್ಫರ್, ಪೊಟ್ಯಾಶಿಯಂ ನೈಟ್ರೇಟ್, ಗನ್ ಪೌಡರ್, ಇದ್ದಿಲು, ಎಥೆನಾಲ್, ಚೂಪಾದ ಆಯುಧಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಸ್ಮಾರ್ಟ್ ವಾಚ್‌ಗಳು, ನಗದು ಹಾಗೂ ಕೆಲ ದಾಖಲೆಗಳನ್ನೂ ಎನ್‌ಐಎ ಅಧಿಕಾರಿಗಳು ಜಪ್ತಿ ಮಾಡಿದ್ದರು. ಇದೇ ರೀತಿಯ ಸಾಮಗ್ರಿಗಳನ್ನು ಬಳಸಿ ಬಾಂಬ್ ಸಿದ್ಧಪಡಿಸಿ, ರಾಮೇಶ್ವರಂ ಕೆಫೆಯಲ್ಲಿ ಇರಿಸಿರುವ ಶಂಕೆ ಇದೆ ಎಂದು ಹೇಳಿವೆ.

ಮಿನಾಜ್ ಜೊತೆಯಲ್ಲೇ ಬಳ್ಳಾರಿಯ ಸೈಯದ್ ಸಮೀರ್, ಬೆಂಗಳೂರಿನ ಮೊಹಮ್ಮದ್ ಮುನಿರುದ್ದೀನ್, ಸೈಯದ್ ಸಮೀವುಲ್ಲಾ, ಮೊಹಮ್ಮದ್ ಮುಜಮಿಲ್, ಮುಂಬೈನ ಅನಸ್ ಇಕ್ಬಾಲ್ ಶೇಖ್, ದೆಹಲಿಯ ಶಿಯಾನ್ ರಹಮಾನ್ ಅಲಿಯಾಸ್ ಹುಸೇನ್, ಜಾರ್ಖಂಡ್‌ನ ಮೊಹಮ್ಮದ್ ಶಹಬಾಜ್ ಅಲಿಯಾಸ್ ಜುಲ್ಫಿಕರ್ ಅಲಿಯಾಸ್ ಗುಡ್ಡುನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಇದರಲ್ಲಿ ಕೆಲವರು ಎಂಜಿನಿಯರಿಂಗ್ ಹಾಗೂ ಕಾನೂನು ವಿದ್ಯಾರ್ಥಿಗಳು.

ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಸಂಖ್ಯೆ ‘10’ ಎಂಬುದಾಗಿ ಬರೆದಿದ್ದ ಕ್ಯಾಪ್ ಧರಿಸಿದ್ದ. ‘10’ ಸಂಖ್ಯೆ ಸುಳಿವು ಏನು ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆ ಮಾಡುತ್ತಿವೆ’ ಎಂದು ಮೂಲಗಳು ಹೇಳಿವೆ. ‘ಬಹುತೇಕ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಶಂಕಿತ ಧರಿಸಿದ್ದ ಕ್ಯಾಪ್ ಎದ್ದು ಕಾಣುತ್ತಿದೆ. ಶಂಕಿತ ಉದ್ದೇಶಪೂರ್ವಕವಾಗಿಯೇ ಸಂಖ್ಯೆ ‘10’ ಬರೆದಿದ್ದ ಕ್ಯಾಪ್ ಧರಿಸಿರುವ ಅನುಮಾನವಿದೆ. ‘10’ ಸಂಖ್ಯೆ ಅರ್ಥವೇನು? ಹಾಗೂ ಇದು ಮುಂದಿನ ಘಟನೆಯ ಸುಳಿವಾ? ಎಂಬ ಬಗ್ಗೆಯೂ ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ’ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here