ಆ್ಯಸಿಡ್ ಎರಚಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಹಿಡಿದ ವಿದ್ಯಾರ್ಥಿಗಳು-ಸಿಸಿಟಿವಿ ದೃಶ್ಯ ವೈರಲ್

ಮಂಗಳೂರು(ಕಡಬ): ಕಡಬದಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿಯನ್ನು ವಿದ್ಯಾರ್ಥಿಗಳು ಅಟ್ಟಾಡಿಸಿಕೊಂಡು ಹೋಗಿ ಹಿಡಿದು ತರುತ್ತಿರುವ ಎಕ್ಸ್‌ಕ್ಲೂಸಿವ್ ವಿಡಿಯೋವೊಂದು ಇದೀಗ ಮಾಧ್ಯಮಗಳಿಗೆ ಲಭ್ಯವಾಗಿದೆ.

ಆರೋಪಿ ಅಬಿನ್ ಕಾಲೇಜ್‌ ಪ್ರವೇಶಿಸುವುದಕ್ಕೆ ಮುಂಚೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಸಮವಸ್ತ್ರವನ್ನು ಹೋಲುವ ಬಿಳಿ ಅಂಗಿ, ನೀಲಿ ಪ್ಯಾಂಟ್ ಧರಿಸಿಕೊಂಡು ಶಾಲಾ ಆವರಣ ಪ್ರವೇಶಿಸಿದ್ದಾನೆ. ಇದಕ್ಕೆ ಮುಂಚೆ ಈತ ಕಡಬದ ಕೆಳಗಿನ ಬಸ್‌ ನಿಲ್ದಾಣದ ಬಳಿ ಬೇಕರಿಯಲ್ಲಿ ತನ್ನಲ್ಲಿದ್ದ ಎರಡು ಮೊಬೈಲ್‌ ಫೋನ್‌ ಗಳನ್ನು ಚಾರ್ಜ್‌ಗಿಟ್ಟಿದ್ದ. ಈ ವೇಳೆಯೂ ಆತ ಕಪ್ಪು ಪ್ಯಾಂಟ್ ಹಾಗೂ ಕಪ್ಪು ಅಂಗಿ ಧರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೇಕರಿಗೆ ಆತ ಬೆಳಗ್ಗಿನ ಜಾವ 8 ಗಂಟೆ ಸುಮಾರಿಗೆ ಬಂದಿದ್ದಾನೆ. ಫೋನ್‌ ಚಾರ್ಜ್‌ಗಿಟ್ಟು, ಅಲ್ಲೇ ಒಂದು ಬ್ಯಾಗ್ ಬಿಟ್ಟಿದ್ದಾನೆ. ಆ ಬಳಿಕ ಬ್ಯಾಗಿನಿಂದ ಯಾವುದೋ ವಸ್ತುವನ್ನು ತೆಗೆದು ಪ್ಯಾಂಟ್ ಪಾಕೇಟಿನಲ್ಲಿರಿಸಿ ಅಲ್ಲಿಂದ ಹೊರನಡೆದಿದ್ದಾನೆ. ಬಳಿಕ ಆತ ಧರಿಸಿದ್ದ ಕಪ್ಪು ಬಣ್ಣದ ಬಟ್ಟೆಯನ್ನು ತಹಶಿಲ್ದಾರ್ ಕಚೇರಿ ಸಮೀಪದಲ್ಲಿ ಬಿಚ್ಚಿ ಅಲ್ಲಿಂದ ಯೂನಿಫಾರ್ಮ್ ಬಟ್ಟೆ ಧರಿಸಿ ಶಾಲಾ ಆವರಣ ಪ್ರವೇಶಿಸಿ ಆ್ಯಸಿಡ್ ದಾಳಿ ನಡೆಸಿದ್ದ. ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ಎರಚಿ ಓಡುತ್ತಿದ್ದ ಆರೋಪಿ ಅಬಿನ್‌ನನ್ನು ಕಾಲೇಜಿನ ಇತರ ವಿದ್ಯಾರ್ಥಿಗಳು ಓಡಿಸಿ ಹಿಡಿದು ತರುತ್ತಿರುವ ವೀಡಿಯೋ ಇದೀಗ ಮಾಧ್ಯಮಗಳಿಗೆ ಲಭ್ಯವಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here