ಬಿಜೆಪಿ 400 ಸ್ಥಾನಗಳನ್ನು ಗೆದ್ದರೆ ಸಂವಿಧಾನಕ್ಕೆ ತಿದ್ದುಪಡಿ-ಅನಂತ್ ಕುಮಾರ್ ಹೆಗಡೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು, ಕಾಂಗ್ರೆಸ್​ನವರು ಅನಗ್ಯವಾಗಿ ಹೇರಿದ ವಿಚಾರಗಳನ್ನು ಸಂವಿಧಾನದಿಂದ ತೆಗೆದು ಹಾಕಲು ಬಹುಮತದ ಅಗತ್ಯವಿದೆ. ಲೋಕಸಭೆಯಲ್ಲಿ ಬಹುಮತ ಇದೆ. ಆದರೆ, ರಾಜ್ಯಸಭೆಯಲ್ಲಿ 2/3 ರಷ್ಟು ಇಲ್ಲ. ಹೀಗಾಗಿ ಈ ಸಲ ಮೋದಿಯವರು 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಸಂವಿಧಾನದ ಮೂಲರೂಪವನ್ನೇ ತಿರುಚಿದ್ದಾರೆ. ಸಂವಿಧಾನದಲ್ಲಿ ಬೇಡದೇ ಇರುವುದನ್ನೆಲ್ಲ ಸೇರಿಸಿದ್ದಾರೆ. ಇಡೀ ಹಿಂದೂ ಸಮಾಜವನ್ನು ದಮನಿಸುವ ರೀತಿ ಕಾನೂನು ತಂದಿದ್ದಾರೆ. ಇದೆಲ್ಲವೂ ಬದಲಾಗಬೇಕಿದ್ದರೆ ಬಹುಮತ ಇಲ್ಲದಿದ್ದರೆ ಆಗುವುದಿಲ್ಲ. ರಾಜ್ಯಸಭೆಯಲ್ಲೂ ನಮಗೆ ಬಹುಮತ ಬೇಕಾಗುತ್ತದೆ. ಎರಡೂ ಕಡೆ 2/3 ರಷ್ಟು ಬಹುಮತ ಬೇಕಾಗುತ್ತದೆ ಎಂದರು. ಕಾಂಗ್ರೆಸ್‌ನವರು ಹೆಚ್ಚು ಇದ್ದರೆ ಏನೇ ತಿದ್ದುಪಡಿ ತಂದರೂ ಪಾಸ್ ಆಗಲ್ಲ. ಸಿಎಎ ಜಾರಿಗೆ ರಾಜ್ಯಗಳಿಂದ ಒಪ್ಪಿಗೆ ಬಂದಿಲ್ಲ. ಸಿಎಎ ತರದಿದ್ದರೆ ದೇಶದಲ್ಲಿ ಕಾನೂನು ಸುವ್ಯವಸ್ಥೆ ನಮ್ಮ ಕೈಯಲ್ಲಿ ಇರಲ್ಲ. ಇದು ದೇಶದ್ರೋಹಿಗಳ ಆಡಂಬರ ಆಗುತ್ತದೆ. ದೇಶ ಸರಿ ಆಗಬೇಕೆಂದರೆ ನಮ್ಮವರಿಂದಲೇ ಹೊರತು ಬೇರೆಯವರಿಂದ ಆಗಲ್ಲ. ಎಲ್ಲೆಡೆ ಬಹುಮತ ಬರಲಿ, ಆಮೇಲೆ ನೋಡಿ ಮಾರಿಜಾತ್ರೆ ಹೇಗಿರುತ್ತೆ ಅಂತಾ. ಜಾತ್ರೆಗೆ ಒಂದು ಕಳೆ ಬರೋದು ಇದಾದ ನಂತರವೇ ಎಂದು ಹೇಳಿದ್ದಾರೆ.

ಹಿಂದೆ “ಸಂವಿಧಾನ ಬದಲಿಸುವುದಕ್ಕೇ ನಾವು ಬಂದಿರುವುದು” ಎಂದಿದ್ದ ಬಿಜೆಪಿ ಸಂಸದ ಈಗ “ಸಂವಿಧಾನ ತಿದ್ದುಪಡಿ ಮಾಡುತ್ತೇವೆ” ಎಂದಿದ್ದಾರೆ. ಬದಲಾವಣೆಯಿಂದ ತಿದ್ದುಪಡಿಗೆ ಬದಲಾದ ಸಂಸದ ಅನಂತಕುಮಾರ್‌ ಹೆಗಡೆ ಅವರ ಹೇಳಿಕೆಯ ಹಿಂದಿನ ಅಸಲಿ ಉದ್ದೇಶವೇನು? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ʼಸಂವಿಧಾನ ತಿದ್ದುಪಡಿ ಎನ್ನುವುದು ಬಿಜೆಪಿಗೆ ಚುನಾವಣಾ ವಿಷಯವೇ? ಹಾದಿ ಬೀದಿಯಲ್ಲಿ ಚರ್ಚಿಸುವ ವಿಷಯವೇ?. ಈ “ತಿದ್ದುಪಡಿ” ಹೇಳಿಕೆಯ ಹಿಂದಿರುವುದು “ಬದಲಾವಣೆ”ಯ ಇರಾದೆಯೇ?ʼ ಎಂದು ಹರಿಹಾಯ್ದಿದೆ. “ಮಾತೆತ್ತಿದರೆ ಬಿಜೆಪಿ ಸಂವಿಧಾನದ ಬುಡಕ್ಕೆ ಹೋಗುವುದೇಕೆ? ಬಿಜೆಪಿಗರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಬದುಕುವುದಕ್ಕೆ ಸಾಧ್ಯವಾಗುತ್ತಿಲ್ಲವೇ?” ಎಂದು ಎಂದು ಪ್ರಶ್ನಿಸಿದೆ.

LEAVE A REPLY

Please enter your comment!
Please enter your name here