ಮಂಗಳೂರು(ಬೆಂಗಳೂರು): ರಾಜ್ಯದಲ್ಲಿ ಆರೋಗ್ಯಕ್ಕೆ ಅಪಾಯಕಾರಿಯಾದ ಕಾಟನ್ ಕ್ಯಾಂಡಿಯನ್ನು ಬ್ಯಾನ್ ಮಾಡಲಾಗಿದ್ದು, ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವಂತಿಲ್ಲ. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಹೇಳಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕಾಟನ್ ಕ್ಯಾಂಡಿ ಮಾರಾಟ ಮಾಡಿದರೆ ಮತ್ತು ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣ ಬಳಸಿದರೆ ಆಹಾರ ಸುರಕ್ಷಿತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಗಡೆ ಆಹಾರ ಸೇವನೆ ಮಾಡುತ್ತಾರೆ. ಇದರಿಂದ ಕ್ಯಾನ್ಸರ್ ಹಾಗೂ ಅಸಾಂಕ್ರಾಮಿಕ ಖಾಯಿಲೆ ಏರಿಕೆಯಾಗುತ್ತಿದೆ. ಸರಿಯಾದ ಆಹಾರ ತಯಾರು ಮಾಡದಿರುವುದು ಸಮಸ್ಯೆಗೆ ಕಾರಣವಾಗಿದೆ. ಹೆಚ್ಚು ಕೊಬ್ಬುಕಾರಕ, ಉಪ್ಪು ಹಾಗೂ ಸಕ್ಕರೆಯ ಆಹಾರ ಬಳಕೆಯಾಗುತ್ತಿದೆ. ಹೀಗಾಗಿ 171 ಕಡೆ ಗೋಬಿ ಮಂಚೂರಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಿದ್ದೇವೆ. ಇದರಲ್ಲಿ 107 ಮಾದರಿಯಲ್ಲಿ ಕೃತಕ ಬಣ್ಣ ಕಂಡು ಬಂದಿದೆ. 64 ಸುರಕ್ಷಿತವಾದ ಮಾದರಿಗಳು ಕಂಡು ಬಂದಿದೆ. ಟಾರ್ಟ್ರಾಜಿನ್, ಸನ್ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ನಂತ ಕೃತಕ ಬಣ್ಣಗಳನ್ನು ಬಳಸಲಾಗಿದೆ ಇವು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ತಿಳಿಸಿದ್ದಾರೆ.
25 ವಿಧದ ಕಾಟನ್ ಕ್ಯಾಂಡಿ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, 15 ಮಾದರಿಗಳಲ್ಲಿ ಕೃತಕ ಬಣ್ಣ ಬಳಸಿರುವುದು ಕಂಡು ಬಂದಿದೆ. 10ರಲ್ಲಿ ಕೃತಕ ಬಣ್ಣ ಬಳಸಿಲ್ಲ. ಕೃತಕ ಬಣ್ಣ ಬಳಕೆ ಮಾಡಿ ಕ್ಯಾಂಡಿ ತಯಾರು ಮಾಡಬಹುದು. ಆದರೆ ರೊಡಮೈನ್ ಬಿ, ಟಾರ್ಟ್ರಾಜಿನ್ನಂತಹ ಯಾವುದೇ ಬಣ್ಣ ಬಳಸಬಾರದು. ಇದು ಆರೋಗ್ಯಕ್ಕೆ ಹಾನಿಕಾರಕ. ಇದು ಸಂಪೂರ್ಣ ಕಾನೂನು ಬಾಹಿರ. ಪಿಂಕ್ ಕಲರ್ ಬರಲು ರೊಡಮೈನ್ ಬಿ ಬಳಸುತ್ತಾರೆ. ಇನ್ಮುಂದೆ ಬಳಸುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜೊತೆಗೆ 10 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದ ಅವರು ಹೇಳಿದ್ದಾರೆ.