ಮಹಿಳೆಗೆ ಹಲ್ಲೆ ಆರೋಪ-ಉಳ್ಳಾಲ‌ ಠಾಣಾಧಿಕಾರಿ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಮಹಿಳೆಯೋರ್ವಳಿಗೆ ಹಲ್ಲೆ ಮಾಡಿ, ಜೀವ ಬೆದರಿಕೆ ಒಡ್ಡಿದ ಆರೋಪದ ಮೇಲೆ ಉಳ್ಳಾಲ ಠಾಣಾಧಿಕಾರಿ ಹೆಚ್. ಎನ್ ಬಾಲಕೃಷ್ಣ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಮಹಿಳಾ ಕಾರ್ಯದರ್ಶಿಯ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್‌ನ ಅಧೀನದ ಜಾಗಕ್ಕೆ ಬೇಲಿ ಹಾಕುವ ಸಂದರ್ಭ ಟ್ರಸ್ಟ್ ನ ಮಹಿಳಾ ಕಾರ್ಯದರ್ಶಿಗೆ ತಡೆಯೊಡ್ಡಿ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ದಕ್ಷಿಣ ಕನ್ನಡದ ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಗೆ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ, ಸರ್ವೆ ನಂ. 149ರಲ್ಲಿ, ಸುಮಾರು 2 ಎಕರೆ ಜಮೀನು ಮಂಜೂರಾಗಿರುತ್ತದೆ. ಜ.26 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಟ್ರಸ್ಟ್‌ನ ಕಾರ್ಯದರ್ಶಿ ಲತಾ ರೈ ಹಾಗೂ ಸದಸ್ಯರಾದ ಡಾ.ಸಿ.ಎನ್.ಶಂಕರ್ ರಾವ್, ಪ್ರೊ.ಕೆ.ಎಂ.ಬಾಲಕೃಷ್ಣ, ಜಗದೀಶ್ ಕಾಪುಮಲೆ ಎಂಬವರೊಂದಿಗೆ ಟ್ರಸ್ಟ್ ನ ಜಾಗದ ಗಡಿಯಲ್ಲಿ, ಬೇಲಿ ಹಾಕಲು ಸೈಟ್ ಗೆ ತೆರಳಿದ ಸಮಯ ಕೊಣಾಜೆ ಠಾಣೆಯ ಜವಾಬ್ದಾರಿ ಹೊಂದಿದ್ದ ಉಳ್ಳಾಲದ ಸರ್ಕಲ್ ಇನ್ಸ್‌ಕ್ಟರ್ ಬಾಲಕೃಷ್ಣ ಎಚ್ ಎನ್ ರವರು ಸ್ಥಳಕ್ಕೆ ಬಂದಿದ್ದು, ಬೇಲಿ ಹಾಕದಂತೆ ತಡೆದಿದ್ದಾರೆ. ಮಾತ್ರವಲ್ಲದೆ, ಅಲ್ಲಿದ್ದವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಹಿಳಾ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಈ ಕುರಿತು ಲತಾ ರೈ ನೀಡಿರುವ ದೂರಿನಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here