ಮಂಗಳೂರು(ನವದೆಹಲಿ): ಭೂಗತ ಲೋಕದ ನಂಟು, ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಸಂದೀಪ್ ಅಲಿಯಾಸ್ ಕಲಾ ಜತೇಡಿ, ರೌಡಿ ಶೀಟರ್ ಅನುರಾಧ ಚೌಧರಿ ಅಲಿಯಾಸ್ ಮೇಡಂ ಮಿಂಜ್ ಮಂಗಳವಾರ ಹಸಮಣೆ ಏರುವ ಮೂಲಕ ಸತಿ–ಪತಿಗಳಾಗಿದ್ದಾರೆ. ಇವರ ಈ ವಿವಾಹಕ್ಕೆ ಪೊಲೀಸ್ ಬಿಗಿ ಭದ್ರತೆ ಕೂಡಾ ಒದಗಿಸಲಾಗಿತ್ತು.
ದೆಹಲಿಯ ಸಂತೋಷ್ ಗಾರ್ಡನ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿವಾಹ ನೆರವೇರಿದೆ. ಆರು ಗಂಟೆ ಪೆರೋಲ್ ಮೇಲೆ ಜೈಲಿನಿಂದ ಹೊರಬಂದ ಜತೇಡಿ, ಚೌಧರಿಯನ್ನು ವಿವಾಹವಾಗಿದ್ದಾರೆ. ದಂಪತಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಮದುವೆ ಮಂಟಪದ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಕೋವಿಡ್ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಈಗಾಗಲೇ ದಂಪತಿಗಳು ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಇದೀಗ ಮತ್ತೊಮ್ಮೆ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗಿದೆ. ದೆಹಲಿ, ಪಂಜಾಬ್, ರಾಜಸ್ಥಾನ ಸೇರಿದಂತೆ ಮುಂತಾದ ರಾಜ್ಯಗಳ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಪಟ್ಟಿಯಲ್ಲಿ ಜತೇಡಿ ಹೆಸರು ದಾಖಲಾಗಿದೆ. 2020ರಲ್ಲಿ ಜೈಲಿನಿಂದ ಪರಾರಿಯಾಗಿದ್ದು, ಜತೇಡಿ ತಲೆಗೆ ₹7 ಲಕ್ಷ ಬಹುಮಾನವನ್ನೂ ಘೋಷಿಸಲಾಗಿತ್ತು. ಅನುರಾಧ ಚೌಧರಿ ಹೆಸರು ಹಲವು ವರ್ಷಗಳಿಂದ ರೌಡಿ ಶೀಟರ್ ಪಟ್ಟಿಯಲ್ಲಿತ್ತು. ಜತೆಗೆ ಹಲವು ಅಪರಾಧ ಕೃತ್ಯಗಳಲ್ಲಿ ಜೈಲುವಾಸವನ್ನೂ ಅನುಭವಿಸಿದ್ದಾರೆ.