ಮಂಗಳೂರು: ಸಂಸದ ಅನಂತ್ ಕುಮಾರ್ ಹೆಗಡೆ ಅವರ ಸಂವಿಧಾನ ತಿದ್ದುಪಡಿ ಹೇಳಿಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿರ್ದೇಶನದಂತೆ ಬಿಜೆಪಿಯ ನಿರ್ಧಾರವಾಗಿದೆ. ಆದರೆ ಪಕ್ಷದ ಸಂಸದ, ಸಚಿವರಾಗಿದ್ದವರ ಹೇಳಿಕೆ ನಮ್ಮದಲ್ಲ, ಇದು ಅವರ ವೈಯಕ್ತಿಕ ಹೇಳಿಕೆ ಅಲ್ಲ. ಸಂವಿಧಾನವನ್ನು ಒಪ್ಪಿಕೊಂಡಿದ್ದೇವೆ ಎಂದು ಹೇಳುವ ಬಿಜೆಪಿ ಪದೇ ಪದೇ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನ ಸಂವಿಧಾನ ಒಪ್ಪಿ ಮತ ಹಾಕಿ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಅವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅನಂತ್ ಕುಮಾರ್ ಹೆಗಡೆ ಡಿಪ್ರೆಶನ್ ನಲ್ಲಿದ್ದಾರೆ. ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಆಗ ಬಿಜೆಪಿಗೆ ಚುನಾವಣೆವರೆಗಾದರೂ ಶಾಂತಿ ಇರಬಹುದು. ಬಿಜೆಪಿಯವರ ಸಂವಿಧಾನ ತಿದ್ದುಪಡಿ ಹೇಳಿಕೆ ಹೊಸದಲ್ಲ. 75 ವರ್ಷಾಚರಣೆ ವೇಳೆ ಪಾರ್ಲಿಮೆಂಟ್ ನಲ್ಲಿ ನೀಡಿದ ಕೈಪಿಡಿಯಲ್ಲಿ ಸೆಕ್ಯುಲರ್ ಪದ ಬಿಟ್ಟುಬಿಡ್ತಾರೆ. ಅವರಿಗೆ ಸಂವಿಧಾನದ ಬಗ್ಗೆ ಗೌರವವೇ ಇಲ್ಲ. ಅವರದೇ ಸಂವಿಧಾನ ದೇಶದಲ್ಲಿ ತರುವ ಅಜೆಂಡಾ ಹೊಂದಿದ್ದಾರೆ ಎಂದು ಹೇಳಿದ ಐವನ್ ಡಿಸೋಜ, ಇದೊಂದು ಘೋರ ಅಪರಾಧ. ನೀವೂ ಇದರಲ್ಲಿ ಭಾಗಿಯಾಗಿದ್ದೀರಿ. ನಿಮಗೆ ಧೈರ್ಯ ಇದ್ದರೆ ಹೆಗಡೆಯನ್ನು ಇಮಿಡಿಯೇಟ್ ಸಸ್ಪೆಂಡ್ ಮಾಡಿ ಎಂದು ಬಿಜೆಪಿಯನ್ನು ಆಗ್ರಹಿಸಿದ್ದಾರೆ.
ಸಿಎಎ 2019ರಲ್ಲಿ ಪಾಸ್ ಆಗಿ 6 ತಿಂಗಳೊಳಗೆ ಜಾರಿ ಮಾಡಬೇಕಿತ್ತು. ಈಗ ಚುನಾವಣೆ ವೇಳೆ ಜಾರಿ ಮಾಡಿದ್ದಾರೆ. ಈಗ ಇವರ ಆಡಳಿತ ವೈಫಲ್ಯ ಮುಚ್ಚಿಹಾಕಲು ಸಿಎಎ ವಿಷಯ ಮುಂದಿಟ್ಟಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡದೆ ಇಂಥದನ್ನೇ ಮುಂದಿಡುತ್ತಿದ್ದಾರೆ.
150 ಲಕ್ಷ ಕೋಟಿ ಶ್ರೀಮಂತರ ಸಾಲ ಮನ್ನಾ ಮಾಡುವಾಗ ಬಿಜೆಪಿಯವರಿಗೆ ಏನೂ ಸಮಸ್ಯೆ ಇಲ್ಲ. ಬಡವರಿಗೆ ಕೊಟ್ಟರೆ ಮಾತ್ರ ಬಿಟ್ಟಿ ಭಾಗ್ಯ ಅಂತಾರೆ. 25 ಎಂಪಿಗಳು ಯಾವುದೇ ವಿಚಾರದಲ್ಲಿ ರಾಜ್ಯದ ಬಗ್ಗೆ ಕೇಂದ್ರದಲ್ಲಿ ಮಾತನಾಡಿಲ್ಲ ಎಂದು ಹೇಳ್ತಿದ್ದೆವು. ಈಗ ಶೋಭಾ ನಳಿನ್ ಸೋಮಣ್ಣ ಗೋ ಬ್ಯಾಕ್ ಅಂತ ಅವರೇ ಹೇಳ್ತಿದ್ದಾರೆ. ಕೆಲಸ ಮಾಡಿದ್ದರೆ ಗೋ ಬ್ಯಾಕ್ ಅಂತಿದ್ರಾ? ಈಗ ಗೊತ್ತಾಯ್ತಾ ಯಾರು ಕೆಲಸ ಮಾಡಿಲ್ಲ ಅಂತ. ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ. ರಾಜ್ಯದ ಬಗ್ಗೆ ಅವರ ಕಳಕಳಿ ಮೆಚ್ಚುವಂಥದ್ದು. ಜನಾರ್ದನ ಪೂಜಾರಿ ಸೇರಿದಂತೆ ಅನೇಕರು ಎಂಪಿ ಆಗಿದ್ದರು, ನೀವು ಬರಲೇ ಬೇಡಿ ಎಂದದ್ದು ಇದುವರೆಗೆ ಆಗಿಲ್ಲ. ನಂ.1 ಸಂಸದರು ಅಂತಾರೆ, ಲಾಸ್ಟಿಂದ ಮೊದಲೋ? ಎಂದು ಐವನ್ ಡಿಸೋಜ ಪ್ರಶ್ನಿಸಿದ್ದಾರೆ.
ಪತ್ರಿಕಾಗೊಗೋಷ್ಠಿಯಲ್ಲಿ ಪಿ ವಿ ಮೋಹನ್, ಪ್ರಕಾಶ್ ಸಾಲಿಯಾನ್, ಮನುರಾಜ್, ಭರತ್ ಮುಂಡೋಡಿ, ಮೀನಾ ಟೆಲ್ಲಿಸ್,ಇಮ್ರಾನ್, ಜೇಮ್ಸ್, ಸಬಿತಾ ಮತ್ತಿತರರು ಉಪಸ್ಥಿತರಿದ್ದರು.