ಮಂಗಳೂರು: ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ಅದು ಮಾಧ್ಯಮಗಳ ಸೃಷ್ಟಿ ಎಂದು ಹೇಳಿದ್ದ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಇಂದು ಮತ್ತೆ ಈ ವಿಚಾರಕ್ಕೆ ಯು ಟರ್ನ್ ಹೊಡೆದಿದ್ದಾರೆ. ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರ ಜತೆ ಮಾತುಕತೆ ನಡೆಸಿದ ಪುತ್ತಿಲ ಅವರು ಅಲ್ಲೇ ಬಿಜೆಪಿ ಸೇರಿದ್ದಾರೆ, ಮಂಗಳೂರಿನಲ್ಲಿ ಮತ್ತೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಇಲ್ಲ ಎಂದು ಹೇಳಿದ್ದಾರೆ.
ಪುತ್ತೂರಿನಲ್ಲಿ ಪುತ್ತಿಲ ಪರಿವಾರ ಹಾಗೂ ಬಿಜೆಪಿ ನಡುವಿನ ತೆರೆ ಹಿಂದಿನ ಮುಸುಕಿನ ಕುದ್ದಾಟ ನಿನ್ನೆ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪುತ್ತೂರಿಗೆ ಆಗಮಿಸುತ್ತಿದ್ದಂತೆ, ಮತ್ತೆ ತೆರೆ ಮುಂದೆ ಬಂದಿತ್ತು. ಬಾಗಿಲು ಮುಚ್ಚಿ ಬಿಜೆಪಿ ಕಾರ್ಯಕರ್ತರೊಂದಿಗೆ ಘಟನೆಗೆ ಸಂಬಂಧಿಸಿ ಮಾತುಕತೆ ನಡೆಸಿದ ಬಳಿಕ ಜಿಲ್ಲಾಧ್ಯಕ್ಷರು ಮಾಧ್ಯಮದ ಜೊತೆ ಮಾತನಾಡಿದ್ದರು. ಈ ವೇಳೆ ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಸೇರ್ಪಡೆಯಾಗಿಲ್ಲ, ಅದು ಮಾಧ್ಯಮಗಳ ಸೃಷಿ ಎಂದು ಹೇಳಿಕೆ ನೀಡಿದ್ದರು. ಆದರೆ ಈ ವಿಚಾರ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿತ್ತು.
ಇಂದು ಮತ್ತೆ ಮಾಧ್ಯಮದೊಂದಿಗೆ ಮಾತನಾಡಿರುವ ಜಿಲ್ಲಾಧ್ಯಕ್ಷರು, ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರ ಜತೆ ಮಾತುಕತೆ ನಡೆಸಿದ ಪುತ್ತಿಲ ಅವರು ಅಲ್ಲೇ ಬಿಜೆಪಿ ಸೇರಿದ್ದಾರೆ, ಮಂಗಳೂರಿನಲ್ಲಿ ಮತ್ತೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಇಲ್ಲ ಎಂದು ತಿಳಿಸಿದ್ದಾರೆ. ಕೆಲ ಕಾರ್ಯಕರ್ತರಲ್ಲಿ ಗೊಂದಲ ಇರೋದು ಸಹಜವಾದ್ರೂ, ರಾಜ್ಯಾಧ್ಯಕ್ಷರೇ ನಮಗೆ ಸುಪ್ರೀಂ. ಅವರ ಸೂಚನೆಯಂತೆ ಪುತ್ತಿಲ ಪಕ್ಷದಲ್ಲಿ ಇರಲಿದ್ದು, ಲೋಕಸಭಾ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಪುತ್ತೂರು ಬಿಜೆಪಿಯಲ್ಲೂ ಈ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಪುತ್ತಿಲ ಪಕ್ಷೇತರವಾಗಿ ನಿಂತಾಗ ಕೆಲವು ಸಂಘರ್ಷಗಳು ನಡೆದಿವೆ. ಅವುಗಳನ್ನು ಸರಿ ಪಡಿಸುವ ಕೆಲಸ ಆಗ್ತಾ ಇದ್ದು, ಬಹುತೇಕ ಸರಿಯಾಗಿದೆ. ಅರುಣ್ ಪುತ್ತಿಲ ಪಕ್ಷ ಸೇರ್ಪಡೆ ಅವರ ಪರಿವಾರ ವಿಸರ್ಜನೆಯೊಂದಿಗೆ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದಾಗಲೇ ಆಗಿದೆ. ಇನ್ನು ಅವರಿಗೆ ಪಕ್ಷದ ಧ್ವಜ ನೀಡಿ ಸ್ವಾಗತ ಮಾಡುವ ವಿಚಾರ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.