ಮಂಗಳೂರು(ನವದೆಹಲಿ): ಮುಚ್ಚಿದ ಲಕೋಟೆಯಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಚುನಾವಣಾ ಬಾಂಡ್‌ಗಳ ಕುರಿತಾದ ಹೊಸ ಮಾಹಿತಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ.
ಈ ಅಂಕಿ ಅಂಶವು 2019ರ ಏಪ್ರಿಲ್ 12ಕ್ಕೂ ಹಿಂದಿನದ್ದು ಎಂದು ಹೇಳಲಾಗಿದೆ. ಈ ದಿನಾಂಕದ ನಂತರದ ಅಂಕಿ ಅಂಶವನ್ನು ಕಳೆದ ವಾರವೇ ಚುನಾವಣಾ ಆಯೋಗ ಬಹಿರಂಗಪಡಿಸಿತ್ತು. ಈ ಹೊಸ ಅಂಕಿ ಅಂಶಗಳ ಪ್ರಕಾರ, ಕೇಂದ್ರದ ಆಡಳಿತಾರೂಢ ಬಿಜೆಪಿ, ಚುನಾವಣಾ ಬಾಂಡ್‌ಗಳ ಮೂಲಕ ₹6,986.5 ಕೋಟಿ ಪಡೆದುಕೊಂಡಿದೆ. 2019–20ರ ಅವಧಿಯಲ್ಲಿ ಅತ್ಯಧಿಕ ₹2,555 ಕೋಟಿ ಪಡೆದುಕೊಂಡಿದೆ ಎಂದು ಚುನಾವಣಾ ಅಯೋಗದ ಅಂಕಿ ಅಂಶದಿಂದ ತಿಳಿದುಬಂದಿದೆ.
ತೃಣಮೂಲ ಕಾಂಗ್ರೆಸ್ ಪಕ್ಷವು 2ನೇ ಸ್ಥಾನದಲ್ಲಿದ್ದು, ಚುನಾವಣಾ ಬಾಂಡ್ ಮೂಲಕ ₹1,397 ಕೋಟಿ ಪಡೆದುಕೊಂಡಿದೆ.ಕಾಂಗ್ರೆಸ್ ₹1,334.35 ಕೋಟಿ ಪಡೆದಿದೆ. ಡಿಎಂಕೆ ಪಕ್ಷ ₹656.5 ಕೋಟಿ ಪಡೆದುಕೊಂಡಿದ್ದರೆ, ಅದರಲ್ಲಿ ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ಸ್ ಫ್ಯೂಚರ್ ಗೇಮಿಂಗ್‌ನಿಂದಲೇ ₹ 509 ಕೋಟಿ ಚುನಾವಣಾ ಬಾಂಡ್‌ನಿಂದ ಪಡೆದುಕೊಂಡಿದೆ. ಬಿಜೆಡಿಗೆ ₹944.5 ಕೋಟಿ, ವೈಎಸ್‌ಆರ್ ಕಾಂಗ್ರೆಸ್‌ಗೆ ₹442.8 ಕೋಟಿ, ಟಿಡಿಪಿಗೆ ₹181.35 ಕೋಟಿ ಬಂದಿದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ರಾಜಕೀಯ ಪಕ್ಷಗಳು ಮುಚ್ಚಿದ ಲಕೋಟೆಯಲ್ಲಿ ಅಂಕಿ ಅಂಶ ಸಲ್ಲಿಸಿವೆ ಎಂದು ಆಯೋಗ ತಿಳಿಸಿದೆ.
‘ರಾಜಕೀಯ ಪಕ್ಷಗಳಿಂದ ಪಡೆದ ಅಂಕಿ ಅಂಶವನ್ನು ತೆರೆಯದೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು. 2024, ಮಾರ್ಚ್ 15ರ ಸುಪ್ರೀಂ ಕೋರ್ಟ್‌ನ ಆದೇಶದ ಅನುಸಾರವಾಗಿ, ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಭೌತಿಕ ಪ್ರತಿಗಳು, ಡಿಜಿಟಲೀಕರಣಗೊಂಡ ದಾಖಲೆಯನ್ನು ಪೆನ್ ಡ್ರೈವ್ ಮೂಲಕ ಹಿಂದಿರುಗಿಸಿದ್ದಾರೆ. ಅದರನ್ವಯ, ಡಿಜಿಟಲೀಕರಣಗೊಂಡ ಅಂಕಿ ಅಂಶವನ್ನು ಚುನಾವಣಾ ಆಯೋಗದ ಜಾಲತಾಣದಲ್ಲಿ ಪ್ರಕಟಿಸಲಾಗಿದೆ’ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.