ಮಂಗಳೂರು(ನವದೆಹಲಿ): ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳ ಜಾರಿಗೆ ತಡೆ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮೂರು ವಾರಗಳಲ್ಲಿ ಈ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಿದೆ. ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 20 ಅರ್ಜಿಗಳ ಕುರಿತಂತೆ ಪ್ರತಿಕ್ರಿಯಿಸಲು 4 ವಾರಗಳ ಸಮಯಾವಕಾಶ ಕೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆ–2019ರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡುವವರೆಗೂ ಕಾಯ್ದೆಯ ನಿಯಮಗಳ ಜಾರಿಗೆ ತಡೆ ನೀಡುವಂತೆ ಈ ಅರ್ಜಿಗಳಲ್ಲಿ ಕೋರಲಾಗಿದೆ. ‘ಸಿಎಎ ಕಾಯ್ದೆಯು ಯಾರೊಬ್ಬರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ’ಎಂದು ಮೆಹ್ತಾ ಪೀಠದ ಗಮನಕ್ಕೆ ತಂದರು. ಪೌರತ್ವ ತಿದ್ದುಪಡಿ ಮಸೂದೆಗೆ 2019ರ ಡಿಸೆಂಬರ್ 11ರಂದು ಸಂಸತ್ ಅಂಗೀಕಾರ ನೀಡಿತ್ತು. ಮಾರನೆ ದಿನವೇ ರಾಷ್ಟ್ರಪತಿ ಅಂಕಿತ ಹಾಕಿದ್ದರು. ಇತ್ತೀಚೆಗೆ ಅದನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು. 2014ರ ಡಿಸೆಂಬರ್ 31ಕ್ಕೂ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಹಾಗೂ ಕ್ರೈಸ್ತ ಸಮುದಾಯದವರಿಗೆ ಭಾರತದ ಪೌರತ್ವವನ್ನು ನೀಡಲು ಈ ಕಾಯ್ದೆ ಅನುವು ಮಾಡಿಕೊಟ್ಟಿದೆ.