ಮಂಗಳೂರು(ಬೆಂಗಳೂರು): ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣದಲ್ಲಿ 21ನೇ ಆರೋಪಿಯಾಗಿರುವ ಮೊಹಮ್ಮದ್ ಜಾಬೀರ್ ಎಂಬಾತನಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ನಿವಾಸಿ 35 ವರ್ಷದ ಜಾಬೀರ್, ತನ್ನ ಕಸ್ಟಡಿ ವಿಸ್ತರಿಸಿ ಡೀಫಾಲ್ಟ್ ಜಾಮೀನು ತಿರಸ್ಕರಿಸಿ ವಿಶೇಷ ಎನ್ಐಎ ನ್ಯಾಯಾಲಯ 2023ರ ಫೆಬ್ರವರಿ 9ರಂದು ಮಾಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದನು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ.ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಅರ್ಜಿದಾರರ ಪರ ವಕೀಲರು, ವಿಚಾರಣಾ ನ್ಯಾಯಾಲಯದಲ್ಲಿ (ವಿಶೇಷ ನ್ಯಾಯಾಲಯ) ಎನ್ಐಎ ಪರವಾಗಿ ಹಾಜರಾಗಿ ಅರ್ಜಿದಾರರ ಕಸ್ಟಡಿ ಆದೇಶ ವಿಸ್ತರಿಸುವಂತೆ ಕೋರಿರುವವರು ವಿಶೇಷ ಸರ್ಕಾರಿ ಅಭಿಯೋಜಕರಲ್ಲ. ಅಲ್ಲದೇ, ಅವರ ಮೌಖಿಕ ಕೋರಿಕೆಯನ್ನು ಎನ್ಐಎ ವಿಶೇಷ ನ್ಯಾಯಾಲಯ ಪರಿಗಣಸಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಅರ್ಜಿದಾರರ ಪರ ವಾದ, ಕೃತಕ ಮತ್ತು ತಾಂತ್ರಿಕವಾಗಿದೆ. ಅಮೀನ್ ಅವರ ವಾದ ಒಪ್ಪಿದರೆ ವಕೀಲರ ಜೂನಿಯರ್ ಅಥವಾ ಸಹೋದ್ಯೋಗಿ ಅವರ ಪರವಾಗಿ ಹಾಜರಾಗುವಂತಿಲ್ಲ ಎಂಬುದಾಗಲಿದೆ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.
ಪ್ರಕರಣದ ವಿವರ:
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜಾಬೀರ್ 21ನೇ ಆರೋಪಿಯಾಗಿದ್ದು, ಈತನ ವಿರುದ್ಧ ಐಪಿಸಿ ಸೆಕ್ಷನ್ 302, ಶಸ್ತ್ರಾಸ್ತ್ರ ಕಾಯಿದೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ದಾಖಲಿಸಲಾಗಿದೆ.
2022ರ ನವೆಂಬರ್ 7ರಂದು ಜಬೀರ್ ಬಂಧನವಾಗಿದ್ದು, 2023ರ ಜನವರಿ 20ರಂದು 20 ಆರೋಪಿಗಳ ವಿರುದ್ಧ ಎನ್ಐಎ ಆರೋಪ ಪಟ್ಟಿ ಸಲ್ಲಿಸಿ, ಹೆಚ್ಚುವರಿ ತನಿಖೆಗೆ ಮನವಿ ಮಾಡಿತ್ತು. ಆದರೆ, ಜಾಬೀರ್ ವಿರುದ್ಧ ಯಾವುದೇ ಆರೋಪಪಟ್ಟಿ ಸಲ್ಲಿಸಿರಲಿಲ್ಲ. 2023ರ ಫೆಬ್ರವರಿ 6 ರಂದು ಜಾಬೀರ್ 90 ದಿನಗಳ ಬಂಧನ ಅವಧಿ ಮುಗಿದಿದ್ದರೂ ಎನ್ಐಎ ಆರೋಪ ಪಟ್ಟಿ ಸಲ್ಲಿಸಿರಲಿಲ್ಲ. 2023ರ ಫೆಬ್ರವರಿ 7ರಂದು ಪ್ರಕರಣದ ವಿಚಾರಣೆಯ ದಿನ ಜಾಬೀರ್ ಜಾಮೀನು ಕೋರಿರಲಿಲ್ಲ. ಎನ್ಐಎ ಕಸ್ಟಡಿ ವಿಸ್ತರಣೆಯನ್ನೂ ಕೋರಿರಲಿಲ್ಲ. 2023ರ ಫೆಬ್ರವರಿ 8ರಂದು ಎನ್ಐಎ ಕಸ್ಟಡಿ ವಿಸ್ತರಣೆ ಕೋರಿದ್ದು, ಅದೇ ದಿನ ಅರ್ಜಿದಾರರು ಡೀಫಾಲ್ಟ್ ಜಾಮೀನು ಕೋರಿದ್ದರು. ಇದನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಆ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.