ಕ್ರೂರ ಮತ್ತು ಅಪಾಯಕಾರಿ ಶ್ವಾನ ತಳಿಗಳ ಮೇಲಿನ ನಿಷೇಧಕ್ಕೆ ಹೈಕೋರ್ಟ್​ ಮಧ್ಯಂತರ ತಡೆ

ಮಂಗಳೂರು(ಬೆಂಗಳೂರು): ಶ್ವಾನಗಳಲ್ಲಿಯೇ ಅತ್ಯಂತ ಅಪಾಯಕಾರಿ ಮತ್ತು ಕ್ರೂರವಾಗಿರುವ ತಳಿಗಳ ಸಂತಾನೋತ್ಪತ್ತಿಗೆ ನಿಷೇಧ ಹೇರಿ ಕೇಂದ್ರ ಸರಕಾರ ಹೊರಡಿಸಿದ್ದ ಅಧಿಸೂಚನೆಗೆ ಕರ್ನಾಟಕಕ್ಕೆ ಸೀಮಿತವಾಗಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ‌.

ಬೆಂಗಳೂರು ನಿವಾಸಿ ಕಿಂಗ್​​ ಸೋಲ್ಮನ್​ ಡೇವಿಡ್​​ ಮತ್ತು ಮರ್ಡೋನಾ ಜಾನ್​ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಮಧ್ಯಂತರ ಆದೇಶ ನೀಡಿದೆ. ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ಮನುಷ್ಯನ ಜೀವಕ್ಕೆ ಅಪಾಯಕಾರಿ ಮತ್ತು ಉಗ್ರವಾಗಿ ವರ್ತಿಸುವ ತಳಿಯ ಶ್ವಾನಗಳನ್ನು ಗುರುತಿಸುವುದಕ್ಕೆ ಆಳವಾದ ಅಧ್ಯಯನದ ಅಗತ್ಯವಿದೆ. ಆದರೆ, ಸುತ್ತೋಲೆಯಲ್ಲಿ ಉಲ್ಲೇಖಿಸದ ಹಲವು ತಳಿಗಳು ಕ್ರೂರ ವರ್ಗಕ್ಕೆ ಸೇರಲಿವೆ ಎಂದು ಕೋರ್ಟ್ ಗಮನಕ್ಕೆ ತಂದರು. ಈ ವೇಳೆ ಕೇಂದ್ರ ಸರಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸೇಟರ್ ಜನರಲ್, ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ದಿಲ್ಲಿ ನ್ಯಾಯಾಲಯ ಈ ಸಂಬಂಧ ನಿರ್ದೇಶನ ನೀಡಿದೆ. ಕೇಂದ್ರ ಸರಕಾರ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಬೇಕು. ಅರ್ಜಿದಾರರ ಮನವಿಯನ್ನು ಪರಿಗಣಿಸಿ ಆದೇಶದ ಪ್ರತಿ ಲಭ್ಯವಾದ ಮೂರು ತಿಂಗಳೊಳಗೆ ಈ ಕುರಿತಂತೆ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ನಿರ್ದೇಶಿಸಿದೆ‌ ಎಂದರು.

ಕ್ರೂರ ಹಾಗೂ ಅಪಾಯಕಾರಿ ಶ್ವಾನಗಳ ತಳಿಗಳ ಸಂತಾನೋತ್ಪತ್ತಿ ನಿಷೇಧಿಸುವ ಸಲುವಾಗಿ ಅವುಗಳ ಮಾಲೀಕರು ಸಂತಾನಹರಣಕ್ಕಾಗಿ ಅಗತ್ಯವಿರವ ಕ್ರಿಮಿನಾಶಕಗಳನ್ನು ಬಳಕೆ ಮಾಡಬೇಕು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ 2024ರ ಮಾರ್ಚ್ 12ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ವಾದ ಆಲಿಸಿದ ಹೈಕೋರ್ಟ್, ಕೇಂದ್ರದ ಪರ ವಕೀಲರು ಕೇಂದ್ರ ಸರಕಾರ ಸುತ್ತೋಲೆ ಹೊರಡಿಸುವ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಪರಿಗಣಿಸಿರುವ ಎಲ್ಲಾ ಅಂಶಗಳಿರುವ ದಾಖಲೆಗಳನ್ನು ಸಲ್ಲಿಸಬೇಕು. ಅಲ್ಲಿಯವರೆಗೂ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗುವಂತೆ ಸುತ್ತೋಲೆಗೆ ತಡೆ ನೀಡುತ್ತಿರುವುದಾಗಿ ಕೋರ್ಟ್ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 5ಕ್ಕೆ ಮುಂದೂಡಿದೆ.

LEAVE A REPLY

Please enter your comment!
Please enter your name here