ಮಂಗಳೂರು(ಬೆಂಗಳೂರು): ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ, ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು ರಾಜ್ಯಾಧ್ಯಕ್ಷ ವಿಜಯೇಂದ್ರಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು 2023ರ ಆಗಸ್ಟ್ ತಿಂಗಳಲ್ಲಿಯೇ ಘೋಷಿಸಿ, ಆ ಬಳಿಕ ರಾಜಕೀಯದಿಂದ ಅಂತರ ಕಾಪಾಡಿಕೊಂಡಿದ್ದ ಸಂಸದ ಬಿ.ಎನ್. ಬಚ್ಚೇಗೌಡ ಈಗ ಅಧಿಕೃತವಾಗಿ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.2019ರ ಲೋಕಸಭಾ ಚುನಾವಣೆಯಲ್ಲಿ ಬಚ್ಚೇಗೌಡ ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ಅವರನ್ನು 1,82,110 ಮತಗಳ ಅಂತರದಿಂದ ಸೋಲಿಸಿದ್ದರು. ಬಚ್ಚೇಗೌಡ ಅವರಿಗೆ 7,45,912 ಮತಗಳು ಬಿದ್ದರೆ ಮೊಯ್ಲಿ ಅವರಿಗೆ 5,63,802 ಮತಗಳು ಬಿದ್ದಿದ್ದವು.
ರಾಜೀನಾಮೆ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಬಚ್ಚೇಗೌಡ, 2008ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿ, ಶಾಸಕನಾಗಿ, ಸಚಿವನಾಗಿ ಮತ್ತು 2019ರಲ್ಲಿ ಸಂಸದನಾಗಿ ಸಾರ್ವಜನಿಕ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಬಿಜೆಪಿ ಪಕ್ಷಕ್ಕೆ ಮತ್ತು ಪಕ್ಷದ ಹಿರಿಯ ಮುಖಂಡರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆʼʼ ಎಂದು ಹೇಳಿದ್ದಾರೆ. ಆದರೆ, ಬಿ ಎನ್.ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ, ಕಾಂಗ್ರೆಸ್ ಶಾಸಕನಾಗಿರುವುದರಿಂದ ಟಿಕೆಟ್ ತಪ್ಪಿದೆ. ಹೀಗಾಗಿ ಬಿ.ಎನ್.ಬಚ್ಚೇಗೌಡ, ಕಾಂಗ್ರೆಸ್ ಪಕ್ಷಕ್ಕೆ ಸೇರಿ ಲೋಕಸಭಾ ಚುನಾವಣೆಯಲ್ಲಿ ಕೈಗೆ ಬೆಂಬಲ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನೊಂದೆಡೆ ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಹುಬ್ಬಳ್ಳಿಯ ಗೃಹ ಕಚೇರಿಗೆ ಆಗಮಿಸಿದ ಮರಿತಿಬ್ಬೇಗೌಡ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.