ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದ ಇ.ಡಿ-ಹುದ್ದೆಯಲ್ಲಿದ್ದಾಗಲೇ ಜೈಲುಪಾಲಾದ ದೇಶದ ಮೊದಲ ಮುಖ್ಯಮಂತ್ರಿ

ಮಂಗಳೂರು(ನವದೆಹಲಿ): ದೆಹಲಿ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರನ್ನು ದೆಹಲಿ ಅಬಕಾರಿ ನೀತಿ ಹಗರಣದ ಜೊತೆ ನಂಟಿರುವ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾ.21ರ ರಾತ್ರಿ ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ, ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಬೇಕು ಎಂದು ಕೋರಿ ಕೇಜ್ರಿವಾಲ್‌ ಹೈಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌, ಈ ಹಂತದಲ್ಲಿ ಬಲವಂತದ ಕ್ರಮದಿಂದ ರಕ್ಷಣೆ ನೀಡಲು ಗುರುವಾರ(ಮಾ.21) ನಿರಾಕರಿಸಿತು. ಹೈಕೋರ್ಟ್‌ ಆದೇಶ ಹೊರಬಿದ್ದ ಬೆನ್ನಲ್ಲೇ, ಕೇಜ್ರಿವಾಲ್‌ ಅವರ ನಿವಾಸಕ್ಕೆ ತೆರಳಿದ ಇ.ಡಿ ತಂಡ, ಶೋಧ ನಡೆಸಿ, ನಂತರ ಕೇಜ್ರಿವಾಲ್‌ ಅವರನ್ನು ಬಂಧಿಸಿದೆ. ‘ಕೇಜ್ರಿವಾಲ್ ಅವರನ್ನು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಹೆಚ್ಚಿನ ವಿಚಾರಣೆ ನಡೆಸುವುದಕ್ಕಾಗಿ ಅವರನ್ನು ತನ್ನ ವಶಕ್ಕೆ ನೀಡುವಂತೆ ನ್ಯಾಯಾಲಯವನ್ನು ಕೋರಲಾಗುವುದು’ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಕೇಜ್ರಿವಾಲ್‌ ಅವರಿಗೆ ಎಂಟು ಬಾರಿ ಸಮನ್ಸ್‌ ಜಾರಿಗೊಳಿಸಿತ್ತು. ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯ ಆರಂಭಿಸಿರುವ ಈ ಹೊತ್ತಿನಲ್ಲಿ, ಪಕ್ಷದ ಸಂಚಾಲಕರೂ ಆಗಿರುವ ಕೇಜ್ರಿವಾಲ್‌ ವಿರುದ್ಧ ಇ.ಡಿ ಕೈಗೊಂಡಿರುವ ಕ್ರಮಕ್ಕೆ ಆಮ್‌ ಆದ್ಮಿ ಪಕ್ಷವು (ಎಎಪಿ) ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

LEAVE A REPLY

Please enter your comment!
Please enter your name here