ವಿನಾಯಕ‌ ಬಾಳಿಗಾ ಹತ್ಯೆಗೆ 8 ವರ್ಷ-ದೇಶಪ್ರೇಮಿ ಸಂಘಟನೆಗಳ ಒಕ್ಕೂಟದಿಂದ ಕಾಲ್ನಡಿಗೆ ಜಾಥಾ

ಮಂಗಳೂರು: ಆರ್‌ಟಿಐ ಕಾರ್ಯಕರ್ತ ವಿನಾಯಕ‌ ಬಾಳಿಗಾ ಕೊಲೆ ನಡೆದು ಇಂದಿಗೆ 8 ವರ್ಷಗಳಾಗಿವೆ. ಆದರೆ ಬಾಳಿಗಾ ಕುಟುಂಬಕ್ಕೆ ‌ನ್ಯಾಯ ಒದಗಿಸಿಕೊಡುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಹಿರಿಯ ವಿಚಾರವಾದಿ, ಸಾಮಾಜಿಕ ಹೋರಾಟಗಾರ ಪ್ರೊ. ನರೇಂದ್ರ ನಾಯಕ್ ಆರೋಪಿಸಿದ್ದಾರೆ.

ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ಮತ್ತು ಪ್ರಗತಿಪರರು ನಗರದ ಕಾರ್‌ಸ್ಟ್ರೀಟ್‌ನ ಶ್ರೀ ವೆಂಕರಮಣ ದೇವಸ್ಥಾನದ ಮುಂದೆ ಆಯೋಜಿಸಿದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಅವರು ‌ಮಾತನಾಡಿದರು. ವಿನಾಯಕ‌ ಬಾಳಿಗಾ ಕೊಲೆಯಾಗಿ ಇಂದಿಗೆ 8 ವರ್ಷವಾಗಿದೆ. ಪ್ರತೀ ವರ್ಷವೂ ನಾವು ನ್ಯಾಯಕ್ಕಾಗಿ ಆಗ್ರಹಿಸುತ್ತಲೇ ಬಂದಿದ್ದೇವೆ. ಆದರೆ ನ್ಯಾಯ ಮಾತ್ರ ಮರೀಚಿಕೆಯಾಗಿದೆ‌. ಬಿಜೆಪಿಯ ಸಂಸದರು, ಶಾಸಕರು ಹತ್ಯೆಯಾದ ವಿನಾಯಕ ಬಾಳಿಗಾರ ಮನೆಗೆ ಭೇಟಿ ನೀಡಲಿಲ್ಲ. ಕೊಲೆಯಾದಾಗ ಶಾಸಕರಾಗಿದ್ದವರು ಮೊಸಳೆ ಕಣ್ಣೀರು ಸುರಿಸಿದರು. ಬಳಿಕ ಅವರು ಮೌನ ವಹಿಸಿದ್ದಾರೆ. ಕಾಂಗ್ರೆಸ್ ನಾಯಕಿ‌ ಪುಷ್ಪಾ ಅಮರನಾಥ್ ಎರಡು ವರ್ಷದ ಹಿಂದೆ ಇದೇ ಸ್ಥಳದಲ್ಲಿ ನಿಂತು ಭರವಸೆಯ ಮಾತುಗಳನ್ನಾಡಿದ್ದರು. ಆದರೆ ಇನ್ನೂ ಅವರು ಭರವಸೆ ಈಡೇರಿಸಿಲ್ಲ. ಕೊಲೆ ಪ್ರಕರಣದ ಆರೋಪಿಯೊಬ್ಬ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರೊಬ್ಬರ ಜೊತೆ ತಿರುಗಾಡುತ್ತಿದ್ದಾನೆ ಎಂದು ಪ್ರೊ. ನರೇಂದ್ರ ನಾಯಕ್ ಆರೋಪಿಸಿದರು. ರಾಜ್ಯಾದ್ಯಂತ ಸುದ್ದಿಯಾದ ಸೌಜನ್ಯ ಮತ್ತು ವಿನಾಯಕ ಬಾಳಿಗಾ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ-ಕಾಂಗ್ರೆಸ್ ಪಕ್ಷದ ಅಸಡ್ಡೆ ಮುಂದುವರಿದಿದೆ‌‌‌. ಸರಕಾರ ಬದಲಾದರೂ ಈ ವಿಷಯದಲ್ಲಿ‌ ಆ ಪಕ್ಷದ ಧೋರಣೆ ಬದಲಾಗಿಲ್ಲ ಎಂದು ಪ್ರೊ. ನರೇಂದ್ರ ನಾಯಕ್ ಹೇಳಿದರು.

ವಿನಾಯಕ‌ ಬಾಳಿಗಾರ ಸಹೋದರಿಯರಾದ ಅನುರಾಧಾ ಮತ್ತು ಹರ್ಷಾ ಪ್ರಾರ್ಥಿಸಿದರು. ಶ್ರೀ ವೆಂಕಟರಮಣ ದೇವಸ್ಥಾನದಿಂದ ವಿನಾಯಕ ಬಾಳಿಗಾರ ಮನೆಯವರೆಗೆ ನಡೆದ ಕಾಲ್ನಡಿಗೆ ಜಾಥಾದಲ್ಲಿ ಹೋರಾಟಗಾರರಾದ ಡಾ. ಪಿವಿ‌ ಭಂಡಾರಿ, ಎಂಜಿ ಹೆಗಡೆ, ಮುನೀರ್ ಕಾಟಿಪಳ್ಳ, ಮಂಗಳಾ ನಾಯಕ್, ಬಿಕೆ ಇಮ್ತಿಯಾಝ್, ಡಾ. ಕೃಷ್ಣಪ್ಪ ಕೊಂಚಾಡಿ, ದೇವದಾಸ್ ಎಂ, ವಾಸುದೇವ ಉಚ್ಚಿಲ್, ನಂದಗೋಪಾಲ್, ಪ್ರಕಾಶ್ ಸಾಲ್ಯಾನ್, ಅಪ್ಪಿಲತಾ, ರಘು ಎಕ್ಕಾರ್, ಮುಹಮ್ಮದ್ ಕುಂಜತ್ತಬೈಲ್, ಸುನೀಲ್ ಬಜಿಲಕೇರಿ ಮತ್ತಿತರರು ಪಾಲ್ಗೊಂಡಿದ್ದರು. ಡಿವೈಎಫ್‌ಐ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here