ಮಂಗಳೂರು: ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣವೊಂದು ನಿನ್ನೆ ಬೆಳಕಿಗೆ ಬಂದಿದ್ದು, ಕಾರಿನಲ್ಲಿ ಸುಟ್ಟು ಕರಕಲಾದ ಬೆಳ್ತಂಗಡಿಯ ಮೂವರ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ಈ ಘಟನೆಗೆ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಹನ್ನೊಂದು ದಿನದ ಹಿಂದೆ ತುಮಕೂರಿಗೆ ವ್ಯವಹಾರ ಕುರಿತು ಮದಡ್ಕದ ರಫೀಕ್ ಎಂಬವರ ಕೆಎ 43 ಎನ್1571 ನೋಂದಣಿಯ ಬಿಳಿ ಬಣ್ಣದ ಎಸ್‌ಪ್ರೆಸ್ಸೋ ಕಾರನ್ನು ಬಾಡಿಗೆಗೆ ಪಡೆದು ಬೆಳ್ತಂಗಡಿ ತಾಲೂಕಿನ ಶಾಹುಲ್ ಹಮೀದ್ (45), ಇಸಾಕ್(56), ಸಿದ್ದಿಕ್( 34) ಮೂವರು ತುಮಕೂರಿಗೆ ತೆರಳಿದ್ದರು ಎಂದು ವರದಿಯಾಗಿದೆ. ನಕಲಿ ಚಿನ್ನದ ದಂಧೆಯ ಆಸೆಗೆ ಇವರು ಬಲಿಯಾಗಿದ್ದಾರೆ ಎಂದು ಪ್ರಾಥಮಿಕ ವಿಚಾರಣೆ ಸಂದರ್ಭ ತಿಳಿದು ಬಂದಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವ ಸಂದರ್ಭ ಚಿನ್ನದ ಹಂಡೆ ದೊರಕಿದ್ದು, ಚಿನ್ನವನ್ನು ಕಡಿಮೆ ಬೆಲೆ ನಿಮಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆದು ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಇವರ ಕೈಕಾಲನ್ನು ಕಟ್ಟಿ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಇನ್ನು ಮದಡ್ಕದ ಇಸಾಕ್ ಉಜಿರೆಯಲ್ಲಿರುವ ತನ್ನ ಮನೆ ಮಾರಾಟ ಮಾಡಿ ಮತ್ತು ಮಗಳ ಚಿನ್ನವನ್ನು ಅಡವಿಟ್ಟು ಸುಮಾರು 35 ಲಕ್ಷ ರೂಪಾಯಿಯನ್ನು ತುಮಕೂರಿಗೆ ಹೋಗುವ ವೇಳೆ ಜೊತೆಯಲ್ಲಿ ಒಯ್ದಿದ್ದರು ಎಂದು ಇಸಾಕ್ ಪತ್ನಿ ವಿಚಾರಣೆ ನಡೆಸುತ್ತಿರುವ ಕೋರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿದ್ದೀಕ್ ಮತ್ತು ಶಾಹುಲ್ ಹಮೀದ್ ಸ್ನೇಹಿತರ ಮೂಲಕ ಸಾಲವಾಗಿ ಪಡೆದು ಸುಮಾರು 15 ಲಕ್ಷಕ್ಕೂ ಮಿಕ್ಕಿ ಹಣವನ್ನು ಕೊಂಡೊಯ್ದಿರುವುದಾಗಿ ಅವರ ಮನೆಯವರು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಮೃತ ದುರ್ದೈವಿಗಳು ಚಿನ್ನದ ಆಸೆಯಲ್ಲಿ ಸುಮಾರು 55 ಲಕ್ಷಕ್ಕೂ ಹೆಚ್ಚು ಹಣವನ್ನು ಕಳಕೊಂಡಿರುವುದಾಗಿ ಹೇಳಲಾಗಿದೆ.
ಮಾ.22 ರಂದು ಸುಮೊಟೋ ಕೇಸು ದಾಖಲಿಸಿಕೊಂಡಿರುವ ಕೋರಾ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಬೆಳ್ತಂಗಡಿಯ ಮೂವರ ಶವ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಡಿಎನ್‌ಎ ಪರೀಕ್ಷೆ ಬಳಿಕ ಮನೆಮಂದಿಗೆ ಮೃತದೇಹವನ್ನು ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಡಿಎನ್‌ಎ ವರದಿ ಕೈಸೇರಲು ಒಂದು ವಾರ ಬೇಕಾಗಬಹುದು ಎಂದು ಪೊಲೀಸರು ಮನೆಮಂದಿಗೆ ತಿಳಿಸಿರುವುದಾಗಿ ತಿಳಿದುಬಂದಿದೆ.