25 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಮುಡಾ ಕಮಿಷನರ್, ದಲ್ಲಾಳಿ ಲೋಕಾಯುಕ್ತ ಬಲೆಗೆ

ಮಂಗಳೂರು: ಉದ್ಯಮಿಯೊಬ್ಬರಿಂದ 25 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದ ಕಮಿಷನರ್ ಮತ್ತು ದಲ್ಲಾಳಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಮುಡಾ ಆಯುಕ್ತ ಮನ್ಸೂ‌ರ್ ಅಲಿ ಅವರು ದಲ್ಲಾಳಿ ಮುಹಮ್ಮದ್ ಸಲೀಂ ಎಂಬಾತನ ಮುಖಾಂತರ 25 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದರು. ಹಣ ಸ್ವೀಕರಿಸುತ್ತಿದ್ದ ವೇಳೆ‌, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.

ದೂರುದಾರ ಗಿರಿಧರ್‌ ಶೆಟ್ಟಿ ತಾಲೂಕಿನ ಕುಡುಪು ಗ್ರಾಮದ ಸರ್ವೇ ನಂ. 57/ಪಿ ರಲ್ಲಿನ ಒಟ್ಟು 10.8 ಎಕರೆ ಜಮೀನು ಖರೀದಿಸಿದ್ದರು. ಈ ಜಮೀನನ್ನು ಟಿಡಿಆರ್ ನಿಯಮದಡಿ ಖರೀದಿ ಮಾಡುವ ಬಗ್ಗೆ ಜಮೀನಿನ ಈ ಹಿಂದಿನ ಮಾಲೀಕರೊಂದಿಗೆ ಪತ್ರ ವ್ಯವಹಾರ ಮಾಡಿದ್ದರು. ಅದರಂತೆ ಈ ಜಮೀನು 2024 ಜನವರಿಯಲ್ಲಿ ಪಾಲಿಕೆಯ ಹೆಸರಿಗೆ ನೋಂದಣಿ ಸಹ ಆಗಿತ್ತು. ಬಳಿಕ ಪಾಲಿಕೆಯ ಆಯುಕ್ತರು ಟಿಡಿಆರ್ ನೀಡಲು ಮುಡಾ ಆಯುಕ್ತರಿಗೆ ಫೆಬ್ರವರಿ ತಿಂಗಳಲ್ಲಿ ಕಳುಹಿಸಿದ್ದರು. ಆದರೆ, ಮುಡಾ ಆಯುಕ್ತ ಮನ್ಸೂರ್ ಅಲಿ ಈ ಫೈಲ್ ಅನ್ನು ಪೆಂಡಿಂಗ್ ಇಟ್ಟಿದ್ದರು. ಈ ಬಗ್ಗೆ ದೂರುದಾರರು ಮುಡಾ ಆಯುಕ್ತ ಮನ್ಸೂರ್ ಅಲಿ ಅವರ ಬಳಿ ಹೋಗಿ ಮಾತನಾಡಿದಾಗ 25 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಲಿ ಅವರ ನಿರ್ದೇಶನದಂತೆ ಬ್ರೋಕರ್ ಮುಹಮ್ಮದ್ ಸಲಿಂ ಅವರು ದೂರುದಾರರಿಂದ ರೂ. 25 ಲಕ್ಷ ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಂಗಳೂರು ಲೋಕಾಯುಕ್ತ ಪ್ರಭಾರ ಎಸ್‌ ಪಿ ಚೆಲುವರಾಜ್‌ ಬಿ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ ಅಮಾನುಲಾ ಎ, ಸುರೇಶ್‌ ಕುಮಾರ್‌ ಪಿ ಸಿಬ್ಬಂದಿಗಳ ಜೊತೆ ಈ ಕಾರ್ಯಾಚರಣೆ ನಡೆಸಿದ್ದರು.

LEAVE A REPLY

Please enter your comment!
Please enter your name here