ಆರ್‌ಟಿಇ ಮೂಲಕ ಪ್ರವೇಶಾತಿಗೆ ಅರ್ಜಿ ಆಹ್ವಾನ-ಇಲ್ಲಿದೆ ಸಂಪೂರ್ಣ ಮಾಹಿತಿ

ಮಂಗಳೂರು: ಕರ್ನಾಟಕದ ಖಾಸಗಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ 2009 ಮೂಲಕ 1 ರಿಂದ 8ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತಾದ ಸಂಪೂರ್ಣ ಮಾಹಿತಿಗಳು ಇಲ್ಲಿದೆ.

ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಣ ಹಕ್ಕು ಕಾಯ್ದೆ ಮೂಲಕ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಅರ್ಜಿ ಆಹ್ವಾನಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ ನಲ್ಲಿ ಅರ್ಜಿಗೆ ಈಗಾಗಲೇ ಆನ್‌ಲೈನ್‌ ಲಿಂಕ್‌ ಅನ್ನು ಬಿಡುಗಡೆ ಮಾಡಲಾಗಿದೆ. ಆರ್‌ಟಿಇ ಕಾಯ್ದೆ ಅನ್ವಯ 1 ರಿಂದ 8ನೇ ತರಗತಿಗೆ ಪ್ರವೇಶಕ್ಕೆ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಅಡ್ಮಿಷನ್‌ ಮಾಡಿಸಲು ಬಯಸುವ ಪೋಷಕರು ಅರ್ಜಿ ಸಲ್ಲಿಸಬಹುದಾಗಿದೆ. ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಸರ್ಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಪ್ರಾರಂಭಿಕ ತರಗತಿಗಳಿಗೆ ಮಕ್ಕಳ ಪ್ರವೇಶಕ್ಕೆ ವಯಸ್ಸು ನಿಗದಿಪಡಿಸಲಾಗಿದೆ. ಎಲ್‌ಕೆಜಿ ಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ 4 ವರ್ಷ, 1 ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ 5 ವರ್ಷ 5 ತಿಂಗಳು ಹಾಗೂ ಗರಿಷ್ಠ 7 ವರ್ಷ ನಿಗದಿ ಪಡಿಸಲಾಗಿದೆ. 2024-25ನೇ ಸಾಲಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ಎ.22 ಕೊನೆಯ ದಿನವಾಗಿದ್ದು, ಅರ್ಜಿಗಳ ಪರಿಶೀಲನೆ ಬಳಿಕ ಲಾಟರಿ ಮೂಲಕ ಅರ್ಹರ ಪಟ್ಟಿಯನ್ನು ಎ.26ರಂದು ಬಿಡುಗಡೆ ಮಾಡಲಾಗುವುದು. ಮೊದಲ ಸುತ್ತಿನಲ್ಲಿ ಸೀಟು ಪಡೆದವರು ಶಾಲೆಗಳಲ್ಲಿ ದಾಖಲಾತಿ ಪಡೆಯಲು ಮೇ.13 ಕೊನೆಯ ದಿನಾಂಕವಾಗಿರುತ್ತದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗಳಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಉಚಿತವಾಗಿ ಅಥವಾ ಸರ್ಕಾರದ ಪಾವತಿ ಕೇಂದ್ರಗಳಾದ ಬೆಂಗಳೂರು ನಗರದಲ್ಲಿ, ಬೆಂಗಳೂರು-ಒನ್‌, ಇತರೆ ನಗರ ಪ್ರದೇಶಗಳಲ್ಲಿ ಕರ್ನಾಟಕ-ಒನ್, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ತಂದೆ / ತಾಯಿ / ಪಾಲಕರು ಸ್ವಂತ ಮೊಬೈಲ್‌ ಫೋನ್‌ ಮತ್ತು ಇಂಟರ್‌ನೆಟ್‌ ಸೌಲಭ್ಯ ಲಭ್ಯವಿದ್ದಲ್ಲಿ ಆನ್‌ಲೈನ್‌ ಮುಖಾಂತರ ನೇರವಾಗಿ ಅರ್ಜಿ ಸಲ್ಲಿಸಬಹುದು. ಪೋಷಕರು ಸಲ್ಲಿಸಿದ ಅರ್ಜಿಯಿಂದ ನೈಜತೆ ತಾಳೆ ಆಗದ, ಅಪೂರ್ಣ ಅಥವಾ ಕ್ರಮಬದ್ಧವಲ್ಲದ ಅರ್ಜಿಗಳ ತಂದೆ / ತಾಯಿ ಪೋಷಕರ ಮೊಬೈಲಿಗೆ ದೋಷಗಳನ್ನು ಸರಿಪಡಿಸಲು ಎಸ್‌ಎಂಎಸ್‌ ಕಳುಹಿಸಲಾಗುವುದು. ಸಂಬಂಧಿಸಿದ ಪೋಷಕರು ಸಕಾಲಕ್ಕೆ ಪ್ರತಿಕ್ರಿಯಿಸಬೇಕಾಗುತ್ತದೆ. ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟಿಗಾಗಿ ಪ್ರವೇಶ ಕೋರುವ ಮಗು ಮತ್ತು ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಕಡ್ಡಾಯವಾಗಿರುತ್ತದೆ.

ಆರ್‌ಟಿಇ ಮೂಲಕ ಪ್ರವೇಶಾತಿಗೆ ಶಾಲೆಗಳನ್ನು‌ ಸಂಬಂಧಿತ ವೆಬ್‌ಸೈಟ್‌ ಅನ್ನು ಸಂಪರ್ಕಿಸುವ ಮೂಲಕ ಚೆಕ್‌ ಮಾಡಬಹುದಾಗಿದೆ.
* ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್‌ಸೈಟ್‌ http://www.schooleducation.kar.nic.in/ ಗೆ ಭೇಟಿ ನೀಡಿ.
* ಓಪನ್ ಆದ ಹೋಮ್‌ ಪೇಜ್‌ನಲ್ಲಿ’ Neighbourhood School List for RTE 2024 (Provisional) – Know My School’ ಎಂದಿರುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ.
* ಮತ್ತೊಂದು ಹೊಸ ವೆಬ್‌ಪೇಜ್‌ ಓಪನ್‌ ಆಗುತ್ತದೆ. ಇಲ್ಲಿ ಜಿಲ್ಲೆ, ತಾಲ್ಲೂಕು, ಗ್ರಾಮ ಆಯ್ಕೆ ಮಾಡಿ.
* ನಂತರ ‘View in GIS-MAP’ ಎಂಬಲ್ಲಿ ಕ್ಲಿಕ್ ಮಾಡಿ.
* ಗ್ರಾಮದ ಅಕ್ಕಪಕ್ಕದ ಶಾಲೆಗಳ ಬಗ್ಗೆ ಮಾಹಿತಿಯು ಜಿಐಎಸ್‌ ಮ್ಯಾಪ್‌ನಲ್ಲಿ ಮತ್ತೊಂದು ಹೊಸ ಪೇಜ್‌ನಲ್ಲಿ ತೆರೆದುಕೊಳ್ಳುತ್ತದೆ.

LEAVE A REPLY

Please enter your comment!
Please enter your name here