ಮಂಗಳೂರು: ಗುರುಪುರ ಮತ್ತು ಸುರತ್ಕಲ್ ಬ್ಲಾಕ್ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಮಾವೇಶ ನಗರದ ಕಾವೂರು ಸೊಸೈಟಿ ಹಾಲ್ ನಲ್ಲಿ ಜರುಗಿತು.
ಕಾರ್ಯಕರ್ತರನ್ನುದ್ದೇಶಿಸಿ ಮಾತಾಡಿದ ಮಾಜಿ ಸಚಿವ ಬಿ. ರಮಾನಾಥ್ ರೈ ಅವರು, ದಕ್ಷಿಣ ಕನ್ನಡ ಜಿಲ್ಲೆ ಇಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೆ ಅದಕ್ಕೆ ಭೂ ಮಸೂದೆ ಕಾನೂನು ಮತ್ತು ಕಾಂಗ್ರೆಸ್ ಸರಕಾರ ಕಾರಣ. ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಬಳಿಕವಷ್ಟೇ ರಾಜೀವ್ ಗಾಂಧಿ ಅಧಿಕಾರಕ್ಕೆ ಬಂದರು. ಅವರ ಕಗ್ಗೊಲೆ ನಡೆದ ಬಳಿಕವಷ್ಟೇ ರಾಹುಲ್ ಗಾಂಧಿ ಎದುರು ಬಂದರು. ಕಾಂಗ್ರೆಸ್ ಪಕ್ಷದ್ದು ವಂಶ ಪಾರಂಪರ್ಯ ಆಡಳಿತ ಎನ್ನುವ ಬಿಜೆಪಿಗರು ಇದನ್ನು ತಿಳಿದುಕೊಳ್ಳಬೇಕೆಂದರು.
ಇದೇ ವೇಳೆ ಮಾತನಾಡಿದ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್.ಆರ್, ಕಾಂಗ್ರೆಸ್‌ನಿಂದ ಮಾತ್ರ ಜಿಲ್ಲೆಯ ಅಭಿವೃದ್ಧಿಯಾಗಿದೆ. ಹಾಲಿ ಸಂಸದರು ಅಭಿವೃದ್ಧಿ ಕಾರ್ಯ ಮಾಡಿಯೇ ಇಲ್ಲ ಎಂದು ಆರೋಪಿಸಿದ್ದಾರೆ. ಪಕ್ಷದ ಗೆಲುವುವಿಗೆ ಕಾಂಗ್ರೆಸ್ ನ ಸಾಧನೆಯನ್ನು ಮನೆ ಮನಕ್ಕೆ ತಲುಪಿಸಿ. ನಾನು ನಿಮ್ಮವನೇ ಎಂದೂ ತಲೆತಗ್ಗಿಸುವ ಕೆಲಸ ಮಾಡಲ್ಲ ಎಂದು ಹೇಳಿದ್ದಾರೆ.
ವೇದಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಮೇಯರ್ ಶಶಿಧರ್ ಶೆಟ್ಟಿ, ಗುಲ್ಜಾರ್ ಬಾನು, ಕವಿತಾ ಸನಿಲ್, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವರಿಸ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್ ಚಿತ್ರಾಪುರ, ಸುರೇಂದ್ರ ಕಂಬಳಿ, ಐವನ್ ಡಿಸೋಜ, ಪ್ರತಿಭಾ ಕುಳಾಯಿ, ರಾಕೇಶ್ ಮಲ್ಲಿ, ಸದಾಶಿವ ಶೆಟ್ಟಿ, ಎಂಜಿ ಹೆಗಡೆ, ಗಿರೀಶ್ ಆಳ್ವ, ಹರಿನಾಥ್, ಅಶ್ರಫ್, ನವೀನ್ ಡಿಸೋಜ, ಶಾಲೆಟ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.