ಮಂಗಳೂರು(ಬೆಳ್ತಂಗಡಿ): ರಸ್ತೆ ದಾಟುತ್ತಿದ್ದ ಶೇಖರ್ ಬಂಗೇರ ಹೇರಾಜೆ (65) ಅವರಿಗೆ ಮಾ.28ರ ರಾತ್ರಿ ಸ್ಕೂಟರ್ ಡಿಕ್ಕಿ ಹೊಡೆದಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲಿ ಹೇರಾಜೆ ಮೃತಪಟ್ಟಿದ್ದಾರೆ.
ಹೇರಾಜೆ ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಕ್ಷಿತ್ ಶಿವರಾಂ ಮತ್ತು ಚಿತ್ರನಟ ವಿಜಯ ರಾಘವೇಂದ್ರ ಅವರ ಪತ್ನಿ ದಿ.ಸ್ಪಂದನಾ ಅವರ ಸೋದರ ಮಾವ.ಪಟ್ಟಣದ ಸಂತೆಕಟ್ಟೆ ಬಸ್ ನಿಲ್ದಾಣದ ಮುಂಭಾಗದ ಹೋಟೆಲ್‌ನಿಂದ ಪಾರ್ಸಲ್ ಖರೀದಿಸಿದ್ದ ಅವರು, ರಸ್ತೆ ದಾಟುವಾಗ ಸ್ಕೂಟರ್ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಶೇಖರ್ ಬಂಗೇರ ಹೇರಾಜೆ ವಿಜಯ ಬ್ಯಾಂಕಿನ ನಿವೃತ್ತ ಉದ್ಯೋಗಿಯಾಗಿದ್ದು, ಮುಗ್ಗ ಗುತ್ತು ಮನೆತನ ಟ್ರಸ್ಟ್‌ನ ಖಜಾಂಚಿಯಾಗಿದ್ದರು. ಲಾಯಿಲ ರಾಘವೇಂದ್ರ ಮಠದ ಆಡಳಿತ ಮಂಡಳಿಯ ಖಜಾಂಚಿಯಾಗಿರುವ ಹೇರಾಜೆ, ಬೆಳ್ತಂಗಡಿ ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಉಪಾಧ್ಯಕ್ಷರಾಗಿದ್ದರು. ಸ್ಕೂಟರ್‌ನಲ್ಲಿದ್ದ ಬೆಳ್ತಂಗಡಿಯ ಗೇರುಕಟ್ಟೆ ನಿವಾಸಿ ಅನುಷಾ (19) ಗಂಭೀರ ಗಾಯಗೊಂಡಿದ್ದು, ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.