ಮಂಗಳೂರು (ಕೋಲಾರ): ಲೋಕಸಭಾ ಚುನಾವಣೆಗೆ ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವಿ ಗೌತಮ್ ಅವರ ಹೆಸರು ಅಂತಿಮಗೊಳಿಸಿ ಎಐಸಿಸಿ ಪ್ರಕಟಿಸಿದೆ.
ಇತ್ತೀಚೆಗೆ ಕೋಲಾರ ಬಣ ರಾಜಕೀಯ ರಾಜ್ಯದ ಕಾಂಗ್ರೆಸ್ ನಾಯಕರನ್ನು ತಲೆಕೆಡಿಸಿಕೊಳ್ಳುವಂತೆ ಮಾಡಿತ್ತು. ಸಚಿವ ಕೆ.ಎಚ್.ಮುನಿಯಪ್ಪ ಬಣ ಹಾಗೂ ರಮೇಶ್ ಕುಮಾರ್ ಬಣಗಳ ನಡುವೆ ಟಿಕೆಟ್ ಹಂಚಿಕೆ ಸಂಬಂಧ ಭಾರಿ ಅಸಮಾಧಾನ ತಲೆದೂರಿತ್ತು. ಅಲ್ಲದೆ, ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಚಿವ ಕೆ.ಎಚ್ ಮುನಿಯಪ್ಪ ಕುಟುಂಬಕ್ಕೆ ನೀಡಿದರೆ ಜಿಲ್ಲೆಯ ಐದು ಜನ ಶಾಸಕರು ರಾಜಿನಾಮೆ ನೀಡುವುದಾಗಿ ಕಾಂಗ್ರೆಸ್ ಶಾಸಕರು ಹೈಕಮಾಂಡ್ ಗೆ ಎಚ್ಚರಿಕೆ ನೀಡಿದ್ದರು.
ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಸಚಿವ ಎಂ.ಸಿ.ಸುಧಾಕರ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ನಸೀರ್ ಅಹ್ಮದ್ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಎರಡು ಬಣಗಳೊಂದಿಗೆ ಮಾತುಕತೆಯ ಬಳಿಕ ಎರಡೂ ಕಡೆಗೂ ಒಪ್ಪಿಗೆಯಾಗುವಂತಹ ಅಭ್ಯರ್ಥಿಯನ್ನು ಪಕ್ಷ ಕಣಕ್ಕಿಳಿಸಿದೆ.