ಬಜಪೆ ಪೊಲೀಸರ ಯಶಸ್ವಿ ಕಾರ್ಯಾಚರಣೆ ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳ್ಳನ ಬಂಧನ

ಮಂಗಳೂರು: ಬಜಪೆ ಸ್ವಾಮಿಲಪದವು ಎಂಬಲ್ಲಿ ಮಾ.28ರಂದು ಮುಂಜಾನೆ ಬಜಪೆ ಠಾಣೆಯ ಎಎಸ್‌ಐ ರಾಮ ಪೂಜಾರಿ ಮತ್ತು ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿರುವ ವೇಳೆ KA 70 H 4373 ದ್ವಿಚಕ್ರ ವಾಹನ ಅತೀ ವೇಗವಾಗಿ ಬರುತ್ತಿರುವುದನ್ನು ಗಮನಿಸಿ ನಿಲ್ಲಿಸಲು ಸೂಚನೆ ನೀಡಿದಾಗ ದ್ವಿಚಕ್ರ ಸವಾರನು ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರು ಆತನನ್ನು ಅಡ್ಡ ಹಾಕಿ ಹಿಡಿದು, ದಾಖಲೆಗಳನ್ನು ಪರಿಶೀಲಿಸಿದಾಗ ಸದ್ರಿ ವಾಹನಕ್ಕೆ ಯಾವುದೇ ದಾಖಲೆ ಪತ್ರ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈತನ ನಡವಳಿಕೆಯಿಂದ ಇನ್ನಷ್ಟು ಸಂಶಯಗೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಈತ ಈ ದ್ವಿಚಕ್ರ ವಾಹನವನ್ನು ಬಂಟ್ವಾಳದ ಮೆಲ್ಕಾರ್ ಎಂಬಲ್ಲಿಂದ ಕಳವು ಮಾಡಿರುದಾಗಿ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ದ್ವಿಚಕ್ರವಾಹನ ಸವಾರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಉಡುಪಿ ಜಿಲ್ಲೆಯ ಹೈರೋಡಿ ಸಾಸ್ತಾನ ಕುಂದಾಪುರ ನಿವಾಸಿ ಪ್ರಹ್ಲಾದ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಹ್ಲಾದ್ ವಿರುದ್ಧ ಈ ಹಿಂದೆ ಕುಂದಾಪುರ ಪೊಲೀಸ್ ಠಾಣೆ, ಮಂಗಳೂರು ಉತ್ತರ ಪೊಲೀಸ್ ಠಾಣೆ, ಕೋಟ ಪೊಲೀಸ್ ಠಾಣೆ, ಬ್ರಹ್ಮಾವರ ಪೊಲೀಸ್ ಠಾಣೆ, ಉಡುಪಿ ನಗರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಹಾಗೂ ದ್ವಿಚಕ್ರ ವಾಹನಗಳ ಕಳ್ಳತನಕ್ಕೆ ಸಂಬಂದಪಟ್ಟಂತೆ ಹಲವು ಪ್ರಕರಣಗಳು ದಾಖಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ. ಆರೋಪಿ ಪ್ರಹ್ಲಾದನಿಂದ ಸ್ವಾಧೀನಪಡಿಸಿಕೊಂಡ ಬೈಕಿನ ಮೊತ್ತ ಅಂದಾಜು ಒಂದು ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿ ಪ್ರಹ್ಲಾದನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here