ಕ್ರೆಡಿಟ್ ಕಾರ್ಡ್ ಬಳಕೆದಾರರ ಗಮನಕ್ಕೆ-ಇಂದಿನಿಂದ ಹೊಸ ನಿಯಮಗಳು ಜಾರಿ 

ಮಂಗಳೂರು: ಇಂದಿನಿಂದ(ಏ.1) ಹೊಸ ಕ್ರೆಡಿಟ್ ಕಾರ್ಡ್ ನಿಯಮ ಜಾರಿಗೆ ಬರಲಿದೆ. ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಈ ಬಗ್ಗೆ ಗಮನವಹಿಸಬೇಕಾಗಿರುವುದು ಅವಶ್ಯ. ಈ ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ರಿವಾರ್ಡ್‌ಗಳು ಮತ್ತು ಏರ್‌ಪೋರ್ಟ್ ಲಾಂಜ್ ಪ್ರವೇಶದ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿವೆ.

stack of multicolored credit cards on black background

ಏ.1 ರಿಂದ ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು ಅನ್ವಯವಾಗಲಿದ್ದು, ಈ ಬಗ್ಗೆ ಕ್ರೆಡಿಟ್ ಕಾರ್ಡ್ ಬಳಕೆದಾರರು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ಕೆಲವು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು 2024-25ನೇ ಹಣಕಾಸು ವರ್ಷದಲ್ಲಿ ತಮ್ಮ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿವೆ. ಈ ಪಟ್ಟಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್ ಮುಂತಾದ ಪ್ರಮುಖ ಬ್ಯಾಂಕ್‌ಗಳು ಸೇರಿವೆ. ಲಾಂಜ್ ಪ್ರವೇಶ ಮತ್ತು ರಿವಾರ್ಡ್ ಪಾಯಿಂಟ್‌ಗಳ ವಿಷಯದಲ್ಲಿ ಇವು ಪ್ರಮುಖ ಬದಲಾವಣೆಗಳನ್ನು ಮಾಡಿವೆ. ಈ ಎಲ್ಲಾ ಬದಲಾವಣೆಗಳು ಏ.1 ರಿಂದ ಜಾರಿಗೆ ಬರಲಿದೆ.

ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ನೀತಿಯನ್ನು ಬದಲಾಯಿಸಿದೆ. ಇಲ್ಲಿಯವರೆಗೆ ಬಾಡಿಗೆ ಪಾವತಿಯಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತಿದ್ದ ಎಸ್‌ಬಿಐ, ಏಪ್ರಿಲ್ 1 ರಿಂದ ಅಂತಹ ರಿವಾರ್ಡ್​ಗಳನ್ನು ನಿಲ್ಲಿಸುವುದಾಗಿ ಸ್ಪಷ್ಟಪಡಿಸಿದೆ. ಇದು AURUM, ಎಸ್‌ಬಿಐ ಕಾರ್ಡ್ ಎಲೈಟ್, ಸಿಂಪ್ಲಿ ಕ್ಲಿಕ್ ಮುಂತಾದ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಬಳಕೆದಾರರಿಗೆ ನಿರಾಸೆಯನ್ನುಂಟು ಮಾಡಿದೆ. ಐಸಿಐಸಿಐ ಬ್ಯಾಂಕ್ ವಿಮಾನ ನಿಲ್ದಾಣಗಳ ಲಾಂಜ್​​ ಪ್ರವೇಶ ನಿಯಮಗಳನ್ನು ಸಹ ಬದಲಾಯಿಸಿದೆ. ಮುಂಬರುವ ತ್ರೈಮಾಸಿಕದಲ್ಲಿ ಈ ಸೌಲಭ್ಯವನ್ನು ಪಡೆಯಲು ಹಿಂದಿನ ತ್ರೈಮಾಸಿಕದಲ್ಲಿ ಕಾರ್ಡ್ ಮೂಲಕ ಕನಿಷ್ಠ 35,000 ರೂ ಖರ್ಚು ಮಾಡಬೇಕಾಗುತ್ತದೆ. ಇಷ್ಟು ಪ್ರಮಾಣದ ವ್ಯವಹಾರ ಮಾಡಿದ್ದರಷ್ಟೇ ಇದರ ಲಾಭ ಪಡೆದುಕೊಳ್ಳಬಹುದು. ಈ ನಿಯಮಗಳು ಕೋರಲ್ ಕ್ರೆಡಿಟ್ ಕಾರ್ಡ್, ಮೇಕ್ ಮೈ ಟ್ರಿಪ್ ಮತ್ತು ಐಸಿಐಸಿಐ ಬ್ಯಾಂಕ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್ ಸೇರಿದಂತೆ ವಿವಿಧ ರೀತಿಯ ಕಾರ್ಡ್‌ಗಳಿಗೆ ಅನ್ವಯಿಸುತ್ತದೆ. ಈ ಬದಲಾವಣೆಗಳು 2024 ರ ಹೊಸ ಹಣಕಾಸು ವರ್ಷದ ಏಪ್ರಿಲ್ 1 ರಿಂದ ಜಾರಿಗೆ ಬರುತ್ತವೆ.

ಯೆಸ್ ಬ್ಯಾಂಕ್ ಕೂಡ ಲಾಂಜ್ ಪ್ರವೇಶದ ನಿಯಮಗಳನ್ನು ಬದಲಾಯಿಸಿದೆ. ಏಪ್ರಿಲ್ 1 ರಿಂದ ಯಾವುದೇ ತ್ರೈಮಾಸಿಕದಲ್ಲಿ ಲಾಂಜ್ ಸೌಲಭ್ಯವನ್ನು ಪಡೆಯಲು ಹಿಂದಿನ ತ್ರೈಮಾಸಿಕದಲ್ಲಿ ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಕನಿಷ್ಠ ರೂ.10,000 ಖರ್ಚು ಮಾಡಬೇಕಾಗುತ್ತದೆ. ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ ತನ್ನ ಮ್ಯಾಗ್ನಸ್ ಕ್ರೆಡಿಟ್ ಕಾರ್ಡ್‌ನಲ್ಲಿ ರಿವಾರ್ಡ್ ಪಾಯಿಂಟ್‌ಗಳು, ಲೌಂಜ್ ಪ್ರವೇಶ ಮತ್ತು ವಾರ್ಷಿಕ ಶುಲ್ಕಗಳೊಂದಿಗೆ ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದೆ. ವಿಮೆ, ಚಿನ್ನ ಅಥವಾ ಆಭರಣ, ಇಂಧನಕ್ಕೆ ಕ್ರೆಡಿಟ್ ಕಾರ್ಡ್ ಪಾವತಿಯ ಮೇಲೆ ಇನ್ನು ಮುಂದೆ ಯಾವುದೇ ರಿವಾರ್ಡ್ ಪಾಯಿಂಟ್‌ಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಗೆ ಪ್ರವೇಶ ಪಡೆಯಲು ಮೂರು ತಿಂಗಳಲ್ಲಿ ಕನಿಷ್ಠ 50,000 ರೂ. ಗಳ ವ್ಯವಹಾರವನ್ನು ಮಾಡಿರಬೇಕಾಗುತ್ತದೆ. ಆ ಕ್ಯಾಲೆಂಡರ್ ವರ್ಷದಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಲಾಂಜ್​​​​ ಭೇಟಿಗಳ ಸಂಖ್ಯೆಯನ್ನು ವರ್ಷಕ್ಕೆ 8 ರಿಂದ 4 ಕ್ಕೆ ಕಡಿಮೆ ಮಾಡಿದೆ. ಈ ಹೊಸ ಬದಲಾವಣೆಗಳು ಏಪ್ರಿಲ್ 20 ರಿಂದ ಜಾರಿಗೆ ಬರಲಿವೆ ಎಂದು ಆಕ್ಸಿಸ್ ಬ್ಯಾಂಕ್ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here