ಮಂಗಳೂರು: ಸೌದಿ ಅರೇಬಿಯಾದಲ್ಲಿ ಅಂಗಡಿ ನಡೆಸುತ್ತಿದ್ದ ಮಂಗಳೂರು ಮೂಲದ ವ್ಯಕ್ತಿಯೋರ್ವರು ಅಲ್ಲಿನ ಜೈಲಿನಲ್ಲಿದ್ದು ಅವರ ಬಿಡುಗಡೆಗೆ ಕೋರಿ ಕುಟುಂಬಸ್ಥರು ಭಾರತೀಯ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದಾರೆ.
ಮಂಗಳೂರು ಜಪ್ಪಿನಮೊಗರಿನ ನಿವಾಸಿ ಇಸ್ಮಾಯಿಲ್ ದಂಡರಕೋಲಿ (65) 9 ತಿಂಗಳುಗಳಿಂದ ಸೌದಿಯ ಜೈಲಿನಲ್ಲಿದ್ದಾರೆ. ಇಸ್ಮಾಯಿಲ್ 27 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿದ್ದು 10 ವರ್ಷಗಳಿಂದ ರಿಯಾದ್‌ನಲ್ಲಿ ಲಾಂಡ್ರಿ ಶಾಪ್ ನಡೆಸುತ್ತಿದ್ದರು. ಲಾಂಡ್ರಿ ಉದ್ಯಮದಲ್ಲಿ ನಷ್ಟಕ್ಕೊಳಗಾಗಿದ್ದ ಇಸ್ಮಾಯಿಲ್ ಕೇರಳದ ಇಬ್ಬರು ಮತ್ತು ಈಜಿಪ್ಟ್ ದೇಶದ ಒಬ್ಬರಲ್ಲಿ ಸಾಲ ಪಡೆದಿದ್ದರು. ಸಾಲದ ಕಾರಣ ಅವರಿಗೆ ಲಾಂಡ್ರಿ ಶಾಪ್ ಮುಂದುವರಿಸಲು ಅಸಾಧ್ಯವಾಗಿತ್ತು. ಆಗ ಅದರ ಮಾಲಕರು ಲಾಂಡ್ರಿ ಶಾಪ್ ಅನ್ನು ಬೇರೆಯವರಿಗೆ ನೀಡಿದ್ದರು. ಇದೇ ವೇಳೆ ಈಜಿಪ್ಟ್ ದೇಶದ ಪ್ರಜೆಯೊಬ್ಬ ತನ್ನ ಹಣವನ್ನು ಪಡೆದು ವಂಚಿಸಿದ್ದಾನೆಂದು ಇಸ್ಮಾಯಿಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ವಂಚನೆ ಪ್ರಕರಣದಲ್ಲಿ ಸೌದಿಯ ಕಾನೂನಿನಂತೆ ಇಸ್ಮಾಯಿಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
65 ವರ್ಷದ ಇಸ್ಮಾಯಿಲ್ ತೀವ್ರ ಮಧುಮೇಹ ಮತ್ತು ಬಿಪಿಯಿಂದ ಬಳಲುತ್ತಿದ್ದು, ಜೈಲಿನಲ್ಲಿ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ಇಸ್ಮಾಯಿಲ್ ಅವರ ಪುತ್ರಿ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದಿದ್ದು ನೆರವು ಕೋರಿದ್ದಾರೆ. ಇಸ್ಮಾಯಿಲ್ ದೊಡ್ಡ ತಪ್ಪು ಮಾಡಿಲ್ಲ. ಈಜಿಪ್ಟ್ ವ್ಯಕ್ತಿಯ ಬಳಿ 15,000 ರಿಯಾಲ್ ಪಡೆದಿದ್ದರು. ಪ್ರತಿಯಾಗಿ 6,000 ರಿಯಾಲ್ ಹಿಂದಿರುಗಿಸಿದ್ದು 9,000 ರಿಯಾಲ್ ಬಾಕಿ ಇತ್ತು. ಆದರೆ ಸೌದಿಯಲ್ಲಿ ಬಡ್ಡಿ ನಿಷೇಧವಿದ್ದರೂ ಬಡ್ಡಿ ಮೊತ್ತ ಸೇರಿಸಿ 38,000 ರಿಯಾಲ್ ಬಾಕಿ ಇದೆ ಎಂಬುದಾಗಿ ದೂರು ನೀಡಿದ್ದಾರೆ. ವಿದೇಶಾಂಗ ಇಲಾಖೆಯಿಂದ ಫೋನ್ ಕರೆ ಬಂದಿದ್ದು ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.