ಮಂಗಳೂರು(ನವದೆಹಲಿ): ಮಾಜಿ ಮುಖ್ಯಮಂತ್ರಿ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು ಬಿವೈ ರಾಘವೇಂದ್ರ ವಿರುದ್ಧ ಶಿವಮೊಗ್ಗದಲ್ಲಿ ಪಕ್ಷೇತರವಾಗಿ ಕಣಕ್ಕಿಯಲು ತೀರ್ಮಾನಿಸಿದ್ದು, ಹೀಗಾಗಿ ಈಶ್ವರಪ್ಪ ಅವರನ್ನು ಮನವೊಲಿಸುವ ರಾಜ್ಯ ನಾಯಕರ ಪ್ರಯತ್ನ ವಿಫಲವಾಗಿದೆ. ಕೊನೆಗೆ ಮೊನ್ನೆ ಅಷ್ಟೇ ಬೆಂಗಳೂರಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದೆ ಈಶ್ವರಪ್ಪ ರೆಬೆಲ್ ಆಗಿರುವ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆ ಶಾ ಖುದ್ದು ಈಶ್ವರಪ್ಪಗೆ ದೆಹಲಿಗೆ ಬಂದು ಭೇಟಿಯಾಗುವಂತೆ ಸೂಚಿಸಿದ್ದರು. ಅದರಂತೆ ಈಶ್ವರಪ್ಪ ಇಂದು (ಏಪ್ರಿಲ್ 03) ಅಮಿತ್ ಶಾ ಭೇಟಿಗೆ ದೆಹಲಿಗೆ ತೆರಳಿದ್ದಾರೆ. ಆದರೆ ಅಮಿತ್ ಶಾ ಭೇಟಿಯಾಗುವುದು ಬೇಡ ಎಂದು ಹೇಳಿದ್ದಾರಂತೆ. ಹೀಗಾಗಿ ಈಶ್ವರಪ್ಪ ಭೇಟಿಯಾಗದೇ ದೆಹಲಿಯಿಂದ ವಾಪಸ್ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಈಶ್ವರಪ್ಪನವರ ವಿಷಯದಲ್ಲಿ ಹೈಕಮಾಂಡ್ ನಡೆ ಅಚ್ಚರಿಗೆ ಕಾರಣವಾಗಿದೆ.
ನರೇಂದ್ರ ಮೋದಿ, ಅಮಿತ್ ಶಾ ಅಲ್ಲ, ಬ್ರಹ್ಮ ಬಂದು ಹೇಳಿದರೂ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಬಂಡಾಯದ ಬಾವುಟ ಹಾರಿಸಿರುವ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು ದೆಹಲಿಗೆ ಹೋದರೂ ಬಿಕ್ಕಟ್ಟು ಶಮಗೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿಲ್ಲ. ಅಮಿತ್ ಶಾ ಕರೆಯ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ದೆಹಲಿಗೆ ತೆರಳಿದ್ದು, ಬುಧವಾರ (ಮಾ.3) ಅಮಿತ್ ಶಾ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಇದಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಗೃಹಸಚಿವರು ಭೇಟಿಗೆ ಸಿಕ್ಕಿಲ್ಲ. ನಾನು ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದು ಸ್ಪಷ್ಟಪಡಿಸಿದರು. ಗೃಹ ಸಚಿವರು ನನಗೆ ದೂರವಾಣಿ ಕರೆ ಮಾಡಿ ಬುಧವಾರ ದೆಹಲಿಗೆ ಬನ್ನಿ ಎಂದಿದ್ದರು. ಅದಕ್ಕಾಗಿ ನಾನು ದೆಹಲಿಗೆ ಬಂದೆ. ಆದರೆ, ದೆಹಲಿಗೆ ಬಂದ ಬಳಿಕ ಅಮಿತ್ ಶಾ ಅವರ ಕಚೇರಿಯಿಂದ ಫೋನ್ ಬಂತು. ಅಮಿತ್ ಶಾ ಅವರು ಸದ್ಯಕ್ಕೆ ಸಿಗುವುದಿಲ್ಲ ಎಂಬ ಸಂದೇಶ ರವಾನೆಯಾಗಿದೆ. ಇದರ ಅರ್ಥ ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುವುದಾಗಿದೆ. ಬಿ.ವೈ.ರಾಘವೇಂದ್ರ ಸೋಲಬೇಕು ಎಂಬುದು ಇದರ ಅರ್ಥವಾಗಿದೆ ಎಂದು ಹೇಳಿದ್ದಾರೆ.
ಅಮಿತ್ ಶಾ ಅವರು ಸಿಗದೆ ಇರಲು ಕಾರಣ ಇದೇ. ಅವರು ನನ್ನನ್ನು ಭೇಟಿಯಾಗಿದ್ದರೂ ನಾನು ಚುನಾವಣೆಯಲ್ಲಿ ನಿಲ್ಲುತ್ತಿದ್ದೆ. ಆದರೆ, ಇವತ್ತು ಅಮಿತ್ ಶಾ ಅವರು ಸಿಕ್ಕಿಲ್ಲ ಎನ್ನುವ ಅರ್ಥವೇ, ನಾನು ಚುನಾವಣೆಯಲ್ಲಿ ನಿಲ್ಲಬೇಕು, ರಾಘವೇಂದ್ರ ವಿರುದ್ಧ ಗೆಲ್ಲಬೇಕು ಎಂಬುದಾಗಿದೆ. ಅವರ ಆಶಯವೂ ಅದೇ ಆದ ಕಾರಣ ನನಗೆ ಇವತ್ತು ಸಿಕ್ಕಿಲ್ಲ. ಅದಕ್ಕಾಗಿ ನಾನು ವಾಪಸ್ ಹೋಗುತ್ತಿದ್ದೇನೆ. ಯಾರನ್ನೂ ಭೇಟಿಯಾಗುವುದಿಲ್ಲ. ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಆಶೀರ್ವಾದದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪನವರ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಲೆಂದೇ ಹೈಕಮಾಂಡ್ನ ಕೆಲ ನಾಯಕರು ಈಶ್ವರಪ್ಪನವರನ್ನು ಮುಂದೆ ಬಿಟ್ಟಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಇದೀಗ ಇದಕ್ಕೆ ಪೂರಕವೆಂಬತೆ ಹೈಕಮಾಂಡ್ ಸಹ ಈಶ್ವರಪ್ಪನವರನ್ನು ಕರೆದು ಸಂಧಾನ ಸಹ ಮಾಡಲು ಮುಂದಾಗಿಲ್ಲ. ಮೊನ್ನೆ ಅಮಿತ್ ಶಾ ಬೆಂಗಳೂರಿಗೆ ಬಂದಾಗ ಫೋನ್ ಮಾಡಿ ದೆಹಲಿಗೆ ಬಂದು ಭೇಟಿಯಾಗುಬಂತೆ ಹೇಳಿದ್ದರು. ಆದ್ರೆ, ಇಂದು ಈಶ್ವರಪ್ಪ ದೆಹಲಿಗೆ ಹೋದರೂ ಸಹ ಅಮಿತ್ ಶಾ ಭೇಟಿಗೆ ಸಿಕ್ಕಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ.