ಮಂಗಳೂರು(ಬೆಂಗಳೂರು): ಆರ್.ಟಿ. ನಗರದಲ್ಲಿರುವ ಮಿರಾಕಲ್ ಡ್ರಿಂಕ್ಸ್ ಕಟ್ಟಡದಲ್ಲಿ ಎ.5ರಂದು ಬೆಂಕಿ ಅವಘಡ ಸಂಭವಿಸಿದೆ. ಕಟ್ಟಡದಲ್ಲಿ 10ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಆರ್.ಟಿ.ನಗರ ಪೊಲೀಸರ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಡಿಜೆ ಸ್ಫೋಟಗೊಂಡು ಮಿರಾಕಲ್ ಡ್ರಿಂಕ್ಸ್ ನ ಗ್ರೌಂಡ್ ಫ್ಲೋರ್ ಕಚೇರಿಯಲ್ಲಿ ಬೆಂಕಿ ಉಂಟಾಗಿತ್ತು. ತದನಂತರ ಬೆಂಕಿಯ ಕೆನ್ನಾಲಿಗೆ ಎರಡೂ ಫ್ಲೋರ್ಗೂ ವ್ಯಾಪಿಸಿದೆ. ಬೆಂಕಿ, ಹೊಗೆಯಿಂದ ಕಟ್ಟಡದಿಂದ ಹೊರಬರಲು ಸಿಬ್ಬಂದಿ ಪರದಾಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಏಣಿ ಮೂಲಕ ಪಕ್ಕದ ಕಟ್ಟಡಕ್ಕೆ ಸಿಬ್ಬಂದಿಯನ್ನು ಸ್ಥಳಾಂತರಿಸಿದ್ದಾರೆ. ಸದ್ಯ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಕೆಲವರಿಗೆ ಬೆಂಕಿಯ ಹೊಗೆಯಿಂದ ಉಸಿರಾಟದ ಸಮಸ್ಯೆಯಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಬೈರತಿ ಸುರೇಶ್, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇಂದು (ಏಪ್ರಿಲ್ 05) ಮಧ್ಯಾಹ್ನ 12.45ರ ಸಮಯದಲ್ಲಿ ಈ ಅಗ್ನಿ ದುರಂತ ಆಗಿದೆ. ಪೊಲೀಸರಿಂದ ಮಾಹಿತಿ ಕೇಳಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಆಗಿದೆ ಅಂದ್ರು. ಎಲೆಕ್ಟ್ರಿಕ್ ತಜ್ಞರಿಂದ ವರದಿ ಕೇಳಿದ್ದೇವೆ. ಇದರಲ್ಲಿ ಹನ್ನೊಂದು ಜನರು ಒಳಗಡೆ ಸಿಕ್ಕಾಕೊಂಡಿದ್ರು. ಎಲ್ಲರನ್ನೂ ರಕ್ಷಣೆ ಮಾಡಿದ್ದು, ಎಂಟು ಜನರನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಅದರಲ್ಲಿ ಒಬ್ಬರಿಗೆ ಸ್ವಲ್ಪ ಜಾಸ್ತಿ ತೊಂದರೆ ಆಗಿದೆ. ಉಳಿದವರು ಔಟ್ ಆಪ್ ಡೇಂಜರ್ ಇದಾರೆ. ಇದು ಖಾಸಗಿ ಬಿಲ್ಡಿಂಗ್ ಆಗಿದ್ದು, ಬಾಡಿಗೆ ನೀಡಲಾಗಿದೆ. ಜನ ಸುರಕ್ಷಿತವಾಗಿದ್ದಾರೆ. ಯಾರಿಗೂ ಏನೂ ಆಗಿಲ್ಲ ಘಟನೆಗೆ ಅಸಲಿ ಕಾರಣ ಗೊತ್ತಾಗಿಲ್ಲ. ಅದ್ರ ಬಗ್ಗೆ ತನಿಖೆ ನಡೆಯುತ್ತಿದೆ. ಏನಾದ್ರು ಲಾಸ್ ಆಗಿದ್ರೆ ಇನ್ಸುರೆನ್ಸ್ ನಿಂದ ಕ್ಲೈಮ್ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.