ರಷ್ಯಾ ಅಣುಶಕ್ತಿ ಸ್ಥಾವರದ ಮೇಲೆ ಉಕ್ರೇನ್ ಡ್ರೋನ್ ದಾಳಿ-ಬಹುದೊಡ್ಡ ಪರಮಾಣು ದುರಂತದ ಎಚ್ಚರಿಕೆ

ಮಂಗಳೂರು(ಕೀವ್): ರಷ್ಯಾ ನಿಯಂತ್ರಣದಲ್ಲಿರುವ ಝಪೋರಿಝಿವಾ ಅಣುಶಕ್ತಿ ಸ್ಥಾವರದ 6 ನ್ಯೂಕ್ಲಿಯರ್ ರಿಯಾಕ್ಟರ್‌ಗಳ ಪೈಕಿ ಒಂದರ ಮೇಲೆ ಕನಿಷ್ಠ ಮೂರು ನೇರ ಡ್ರೋನ್ ದಾಳಿ ನಡೆದಿದ್ದು, ಬಹುದೊಡ್ಡ ಪರಮಾಣು ಅಪಘಾತದ ಆತಂಕವನ್ನು ಹೆಚ್ಚಿಸಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಹೇಳಿದೆ.

ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಐಎಇಎ ಡಿಜಿ ರಫೆಲ್ ಮರಿಯಾನೊ ಗ್ರಾಸ್ಸೊ, ಝಪೋರಿಝಿವಾದ ಪ್ರಮುಖ ರಿಯಾಕ್ಟರ್ ಮೇಲೆ ದಾಳಿ ನಡೆದಿರುವುದನ್ನು ಖಚಿತಪಡಿಸಿದ್ದಾರೆ. 2022ರ ನವೆಂಬರ್‌ನಿಂದೀಚೆಗೆ ಸ್ಥಾವರದ ಮೇಲೆ ನಡೆದ ಪ್ರಮುಖ ದಾಳಿ ಇದಾಗಿದೆ. ಗಂಭೀರ ಪರಮಾಣು ಅವಘಡವನ್ನು ತಪ್ಪಿಸಲು 5 ತತ್ವಗಳನ್ನು ರೂಪಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಒಂದು ರಿಯಾಕ್ಟರ್ ಸೇರಿದಂತೆ ಅಣುಶಕ್ತಿ ಸ್ಥಾವರದ ಮೇಲೆ ಡ್ರೋನ್ ದಾಳಿಯ ಭೌತಿಕ ಪರಿಣಾಮವನ್ನು ಐಎಇಎ ಖಚಿತಪಡಿಸಿದೆ. 6ನೇ ಘಟಕದಲ್ಲಿ ಉಂಟಾಗಿರುವ ಹಾನಿಯು ಪರಮಾಣು ಸುರಕ್ಷತೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇದೊಂದು ಗಂಭೀರ ದಾಳಿಯಾಗಿದ್ದು, ರಿಯಾಕ್ಟರ್‌ ವ್ಯವಸ್ಥೆಯನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ ಎಂದು ಅದು ಹೇಳಿದೆ.

ಭಾನುವಾರ ಉಕ್ರೇನ್ ಮಿಲಿಟರಿಯ ಡ್ರೋನ್‌ಗಳು ದಾಳಿ ಮಾಡಿವೆ ಎಂದು ಝಪೋರಿಝಿವಾ ಅಣುಶಕ್ತಿ ಸ್ಥಾವರದ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಾವರದ 6ನೇ ಘಟಕದ ಡೋಮ್‌ಗೆ ಹಾನಿಯಾಗಿದೆ ಎಂದೂ ಅವರು ತಿಳಿಸಿದ್ದಾರೆ. ಸದ್ಯ, ಯಾವುದೇ ಗಂಭೀರ ಹಾನಿ ಅಥವಾ ಸಾವು ಸಂಭವಿಸಿಲ್ಲ. ದಾಳಿ ಬಳಿಕವೂ ರೇಡಿಯೇಶನ್ ಮಟ್ಟವೂ ಸಾಮಾನ್ಯವಾಗಿದೆ ಎಂದು ಸ್ಥಾವರದ ಅಧಿಕಾರಿಗಳು ಹೇಳಿದ್ದಾರೆ. ಭಾನುವಾರ ಉಕ್ರೇನ್ ನಡೆಸಿದ ದಿಢೀರ್ ಡ್ರೋನ್ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ರಷ್ಯಾದ ಪರಮಾಣು ಸಂಸ್ಥೆ ರಸಟೋಮ್ ಹೇಳಿದೆ. ಸ್ಥಾವರದ ಕ್ಯಾಂಟೀನ್ ಸಮೀಪವೇ ಡ್ರೋನ್ ದಾಳಿ ನಡೆದಿದೆ.

LEAVE A REPLY

Please enter your comment!
Please enter your name here