ಮಂಗಳೂರು: ಅಧಿಕಾರಕ್ಕೆ ಬಂದ ಕೇವಲ ನೂರು ದಿನಗಳಲ್ಲೇ ಆಡಳಿತ ವಿರೋಧಿ ಅಲೆಗೆ ಗುರಿಯಾಗಿರುವ ಸರಕಾರ ಯಾವುದಾದರೂ ಇದ್ದರೆ ಅದು ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾತ್ರ ಎಂದು ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಹೇಳಿದ್ದಾರೆ. ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು, ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಲೂ ಆಗದೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹಳ್ಳಹಿಡಿಸಿದ ಕೀರ್ತಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಸಲ್ಲಬೇಕು ಎಂದು ಅವರು ಟೀಕಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಭ್ರಷ್ಟಾಚಾರ ತಾಂಡವವಾಡುತ್ತದೆ. ದೇಶ ವಿರೋಧಿ ಶಕ್ತಿಗಳು ತಲೆ ಎತ್ತುತ್ತವೆ. ಬಿಜೆಪಿ ಸರಕಾರದ ಮೇಲೆ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಅದೇ ಕೆಂಪಯ್ಯನವರು ಸಿದ್ದರಾಮಯ್ಯ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆ ನೆಪದಲ್ಲಿ ಸಾರ್ವಜನಿಕರ ಹಣ ಲೂಟಿ ಮಾಡಿ ಕರ್ನಾಟಕದ ಹಣವನ್ನು ಸುಲಿಗೆ ಮಾಡಿದ್ದಾರೆ. ತೆಲಂಗಾಣ ಚುನಾವಣೆ ಸಂದರ್ಭದಲ್ಲಿ 42 ಕೋಟಿ ರೂ ಹಣ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಉಮಾಪತಿ ಮನೆಯಲ್ಲಿ ಪತ್ತೆಯಾಗಿತ್ತು. ಇದು ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕಳೆದ 11 ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 2 ವಿಷಯಗಳನ್ನು ನಿರಂತರವಾಗಿ ಹೇಳಿಕೊಂಡು ಬರುತ್ತಿದ್ದಾರೆ. ನಮಗೆ ಕೇಂದ್ರದ ಸಹಕಾರ ಇಲ್ಲ; ತೆರಿಗೆ ಹಣದ ಹಂಚಿಕೆಯಲ್ಲಿ ಮೋಸ ಆಗುತ್ತಿದೆ., ನಮ್ಮ ದುಡ್ಡು ನಮಗೆ ಕೊಡ್ತಾ ಇಲ್ಲ ಎಂಬ ಹಸಿ ಹಸಿ ಸುಳ್ಳು ಹೇಳುತ್ತಾ ಬರುತ್ತಿದ್ದಾರೆ. ದೇಶದ ಕೇಂದ್ರಾಡಳಿತ ಪ್ರದೇಶಗಳು ಮತ್ತು 30 ರಾಜ್ಯಗಳ ಪೈಕಿ ಕೇವಲ ಕರ್ನಾಟಕ ಮಾತ್ರ ಈ ರೀತಿ ಆರೋಪ ಮಾಡುತ್ತಿದೆ. ಸಿದ್ದರಾಮಯ್ಯ ಸರಕಾರದ ನ್ಯೂನತೆ ಮುಚ್ಚಿಕೊಳ್ಳಲು ಮತ್ತು ಅಭಿವೃದ್ಧಿ ಕೆಲಸ ಆಗದಿರುವುದನ್ನು ಮುಚ್ಚಿ ಹಾಕಲು ಹೀಗೆ ಹೇಳುತ್ತಿದ್ದಾರೆ ಅಷ್ಟೆ. ಆಡಳಿತ ಪಕ್ಷದ ಶಾಸಕರೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬರುತ್ತಿಲ್ಲ ಎಂದು ದೂರುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಸಂಪೂರ್ಣ ನಿಂತೇ ಹೋಗಿವೆ. ತೆರಿಗೆ ಸಂಗ್ರಹ ಮತ್ತು ಕೇಮದ್ರದ ಅನುದಾಗಳ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಂಕಿ-ಅಂಶಗಳ ಸಹಿತ ಉತ್ತರ ಕೊಟ್ಟಿದ್ದಾರೆ.
2014ರ ಮೊದಲು ತೆರಿಗೆ ರೂಪದಲ್ಲಿ ಕೇವಲ 28,000 ಕೋಟಿ ಹಣ ಕರ್ನಾಟಕಕ್ಕೆ ಕೊಡಲಾಗಿದೆ. 2014-24ರ ಅವಧಿಯಲ್ಲಿ 2,80,000 ಕೋಟಿ ಹಣ ನೀಡಲಾಗಿದೆ. ಹಾಗಿದ್ದರೂ ಹಿಂದಿ ವಿಚಾರ., ಕರ್ನಾಟಕದ ಅಸ್ಮಿತೆ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಟೀಕೆ ಮಾಡುತ್ತಾರೆ. ಒಂದು ಅವಕಾಶ ಕೊಟ್ಟರೆ ಬದಲಾವಣೆ ತರುತ್ತೇವೆ ಅನ್ನುತ್ತಾರೆ. ಐದು ದಶಕಗಳ ಕಾಲ ನಿರಂತರವಾಗಿ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ತಂದಿರುವ ಬದಲಾವಣೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅಶ್ವತ್ಥ ನಾರಾಯಣ ಟೀಕಿಸಿದರು. ಕಾಂಗ್ರೆಸ್ ಪ್ರಣಾಳಿಕೆ ನಿಜಕ್ಕೂ ಕಾಂಗ್ರೆಸ್‌ನದ್ದೋ ಅಥವಾ ಇಂಡಿ ಒಕ್ಕೂಟದ್ದೋ ಎಂಬ ಪ್ರಶ್ನೆಯಿದೆ. ಏಕೆಂದರೆ ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸುತ್ತಿರುವುದೇ ಕೇವಲ 200 ಕ್ಷೇತ್ರಗಳಲ್ಲಿ. ಆ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹಾಗಿರುವಾಗ ಯಾವ ಧೈರ್ಯದ ಮೇಲೆ ಇಂತಹ ಭರವಸೆಗಳನ್ನು ನೀಡುತ್ತಿದೆ ಮತ್ತು ಕಾಂಗ್ರೆಸ್ ಇದು ತನ್ನ ಪ್ರಣಾಳಿಕೆ ಎಂದು ಹೇಳಿಕೊಳ್ಳುತ್ತದೆ?
ಕಾಂಗ್ರೆಸ್ ಸಮ ಪ್ರಮಾಣದಲ್ಲಿ ಸ್ಪರ್ಧೆಯನ್ನೇ ಮಾಡಿಲ್ಲ. ಆಗದೆ ಇರುವ ವಿಚಾರ ಮುಂದಿಟ್ಟುಕೊಂಡು, ರಾಜ್ಯದಲ್ಲಿ ಗ್ಯಾರಂಟಿ ಘೋಷಣೆ ಮಾಡಿದಂತೆ ಕೇಂದ್ರದಲ್ಲಿ ಮಾಡಲು ಹೊರಟಿದ್ದೀರಿ. ಪ್ರತಿ ಮಹಿಳೆಗೂ ವರ್ಷಕ್ಕೆ 1 ಲಕ್ಷ ರೂ ಕೊಡುತ್ತೇವೆ ಎಂದು ಹೇಳಿದ್ದಾರೆ. ಒಂದು ಕುಟುಂಬದ ಮಹಿಳೆಗೆ 1 ಲಕ್ಷ ರೂ ಅಂದರೆ ಒಟ್ಟಾರೆ 28-30 ಕೋಟಿ ಕುಟುಂಬಗಳಿಗೆ ಈ ಮೊತ್ತ ನೀಡಲು 25ರಿಂದ 30 ಲಕ್ಷ ಕೋಟಿ ರೂ ಬೇಕಾಗುತ್ತದೆ. ಕೇಂದ್ರ ಸರಕಾರದ ಬಜೆಟ್ ಗಾತ್ರವೇ 40 ಲಕ್ಷ ಕೋಟಿ ರೂ. ಹಾಗಿರುವಾಗ ಸುಳ್ಳು ಗ್ಯಾರಂಟಿಗಳನ್ನು ಈಡೇರಿಸಲು ಹಣವನ್ನು ಎಲ್ಲಿಂದ ತರುತ್ತೀರಿ. ಯಾವ ಸಂಪನ್ಮೂಲದಿಂದ ಹಣ ಜೋಡಿಸುತ್ತೀರಿ? ಹಣದ ಮೂಲ ಯಾವುದು ಅನ್ನುವ ಸ್ಪಷ್ಟನೆ ಕೊಡಬೇಕಲ್ಲ. ಸುಮ್ಮನೆ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳನ್ನು ಕೊಟ್ಟು ಜನರರ ದಾರಿ ತಪ್ಪಿಸುವ ಕೆಲಸ ಮಾಡಿದರೆ ಹೇಗೆ? ದೇಶದ ಜನತೆಗೆ ಮಾಹಿತಿ ನೀಡಿ ಎಂದು ಬಿಜೆಪಿ ವಕ್ತಾರರು ಆಗ್ರಹಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು 80 ಕೋಟಿ ಜನತೆಗೆ ಹಸಿವು ನೀಗಿಸುವಂತಹ ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ 75 ಲಕ್ಷ ಮೆಟ್ಟಿಕ್ ಟನ್ ಆಹಾರ ಧಾನ್ಯ ಬಿಡುಗಡೆ ಮಾಡಿದ್ದಾರೆ. ಕೇಂದ್ರದಿಂದ ಕೊಟ್ಟಿರುವುದನ್ನೇ ತನ್ನದೆಂದು ಹೇಳಿಕೊಂಡು ಕಾಂಗ್ರೆಸ್ ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಅವರು ದೂರಿದರು.
ಕಾಂಗ್ರೆಸ್ ಪ್ರಣಾಳಿಕೆಗೂ ಮುಸ್ಲಿಂ ಲೀಗ್ ಪ್ರಣಾಳಿಕೆಗೂ ವ್ಯತ್ಯಾಸವಿಲ್ಲ:
ಹಿಂದೆ ದೇಶ ವಿಭಜನೆ ಆದ ಸಂದರ್ಭದಲ್ಲಿ ಮುಸ್ಲಿಂ ಲೀಗ್ ಪ್ರಕಟಿಸಿದ ಪ್ರಣಾಳಿಕೆಗೂ ಈಗ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಗೂ ಯಾವುದೇ ವ್ಯತ್ಯಾಸ ಇಲ್ಲ. ಕಾಂಗ್ರೆಸ್ ಮುಸ್ಲಿಂ ಈಗ್‌ನ ಹೊಸ ಅವತಾರದಂತಿದೆ. 1936ರಲ್ಲಿ ಮುಸ್ಲಿಂ ಲೀಗ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ- ತಾನು ಷರೀಯಾ ಕಾನೂನು ಜಾರಿಗೆ ತರುವುದರಾಗಿ ಹೇಳಿತ್ತು. 2024ರಲ್ಲಿ ಕಾಂಗ್ರೆಸ್ ಕೂಡ ಅದೇ ರೀತಿ ಮುಸ್ಲಿಂ ಹಿತಾಸಕ್ತಿಗಳನ್ನು ರಕ್ಷಿಸುವ ಕಾನೂನು ಮಾಡುವುದಾಗಿ ಹೇಳುತ್ತಿದೆ. ಮುಸ್ಲಿಂ ಲೀಗ್ ಬಹುಸಂಖ್ಯಾತರ ವಿರುದ್ಧ ಹೋರಾಟ ಮಾಡುತ್ತದೆ ಎಂದು ಆಗ ಭರವಸೆ ನೀಡಿತ್ತು. ಈಗ ಕಾಂಗ್ರೆಸ್ ಕೂಡ ಅದೇ ಧ್ವನಿಯಲ್ಲಿ ಮಾತಾಡುತ್ತಿದೆ. ದೇಶ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್‌ಗೂ ಕಾಂಗ್ರೆಸ್‌ಗೂ ಯಾವುದೇ ವ್ಯತ್ಯಾಸವಿಲ್ಲ.ಮುಸ್ಲಿಮರಿಗಾಗಿ ವಿಶೇಷ ಸ್ಕಾಲರ್‍ಶಿಪ್ ನೀಡುವುದಾಗಿ ಅಂದು ಮುಸ್ಲಿಂ ಲೀಗ್ ಹೇಳಿದ್ದನ್ನೇ ಇಂದು ಕಾಂಗ್ರೆಸ್ ಹೇಳುತ್ತಿದೆ. ಅದೇ ತುಷ್ಟೀಕರಣ, ದೇಶದ್ರೋಹಿ ಶಕ್ತಿಗಳಿಗೆ ರಕ್ಷಣೆ ನೀಡುವ ಧೋರಣೆ – ಇವೆಲ್ಲ ಕಾಂಗ್ರೆಸ್ ಅನುಸರಿಸುವ ನೀತಿಯಾಗಿದೆ. ಈ ರೀತಿ ದೇಶ ವಿಭಜನೆ ಮಾಡುವಂತಹ ಶಕ್ತಿಗಳಿಗೆ ಉತ್ತೇಜನ ಕೊಡುವುದು, ಆರ್ಟಿಕಲ್ 370 ಪುನಃ ಜಾರಿಗೆ ತರುತ್ತೇವೆ, ತ್ರಿವಳಿ ತಲಾಖ್ ಅನ್ನು ವಾಪಸ್ ತರುತ್ತೇವೆ ಎನ್ನುವುದು ಕಾಂಗ್ರೆಸ್‌ನ ಪ್ರಣಾಳಿಕೆ ಆಗಿದೆ ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮೋದಿ ಸರಕಾರದಲ್ಲಿ ದೇಶದ ಅಭಿವೃದ್ಧಿ:
ಕಳೆದ 50 ವರ್ಷಗಳಲ್ಲಿ ಆಗದಿರುವ ಅಭಿವೃದ್ಧಿ ಚಟುವಟಿಕೆಗಳು, 2014ರಿಂದ 2024ರ ವರೆಗೆ 10 ವರ್ಷಗಳ ನರೇಂದ್ರ ಸರಕಾರದ ಅವಧಿಯಲ್ಲಿ ಆಗಿವೆ. ಉದಾಹರಣೆಗೆ, ಬೆಂಗಳೂರು ಮೈಸೂರು-ಹೆದ್ದಾರಿ ನಿರ್ಮಾಣ ಯೋಜನೆಯಲ್ಲಿ ಸುಮಾರು 7,500 ಜನರಿಗೆ ಮೂರೂವರೆ ವರ್ಷಗಳ ಕಾಲ ಉದ್ಯೋಗ ದೊರೆತಿದೆ. ದೇಶದಲ್ಲಿ ಒಟ್ಟಾರೆ 5 ಲಕ್ಷ ಕೋಟಿ ರೂ.ಗಳು ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಆಗಿದೆ. ಆ ಮೂಲಕ ಲಕ್ಷಾಂತರ ಉದ್ಯೋಗ ಸೃಷ್ಟಿಯೂ ಆಗಿದೆ ಎಂದು ಅವರು ವಿವರಿಸಿದರು.
ರೈಲ್ವೇ ಮೂಕಲ ಸೌಕರ್ಯದ ಉನ್ನತೀಕರಣ, ವಿಮಾನ ನಿಲ್ದಾಣಗಳ ಮೇಲ್ದರ್ಜೆ, ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್ ಹೆದ್ದಾರಿಗಳ ಯೋಜನೆ ಅನುಷ್ಠಾನ, ಬಂದರುಗಳ ಅಭಿವೃದ್ಧಿ, ಕೃಷಿಕರ ಅಭಿವೃದ್ಧಿಗಾಗಿ ಬೆಳೆ ವಿಮೆ, ರೈತ ಸಮ್ಮಾನ ನಿಧಿ ಸೇರಿದಂತೆ 850ಕ್ಕೂ ಹೆಚ್ಚು ಯೋಜನೆಗಳು ಮೋದಿ ಸರಕಾರದ ಅವಧಿಯಲ್ಲಿ ಅನುಷ್ಠಾನಗೊಂಡಿವೆ. ದೇಶದ ಆರ್ಥಿಕತೆ ಈಗ ವಿಶ್ವದಲ್ಲೇ 5ನೇ ಸ್ಥಾನಕ್ಕೆ ಏರಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಅಭಿವೃದ್ಧಿ ಯೋಜನೆಗಳು ಬಂದು ಜಗತ್ತಿನಲ್ಲೇ ನಂಬರ್ ವನ್ ಆರ್ಥಿಕತೆಯಾಗಿ ಭಾರತ ಬೆಳಗಲಿದೆ ಎಂದು ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ದಕ. ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಪಕ್ಷದ ಪ್ರಮುಖರಾದ ರವಿಶಂಕರ ಮಿಜಾರು ಹಾಗೂ ಬಿಜೆಪಿ ದ.ಕ ಕೋಶಾಧಿಕಾರಿ ಸಂಜಯ್ ಪ್ರಭು, ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ವಸಂತ ಜೆ. ಪೂಜಾರಿ ಉಪಸ್ಥಿತರಿದ್ದರು.