ಮಂಗಳೂರು(ಬೆಂಗಳೂರು): ಈ ವರ್ಷ 18 ತುಂಬಿದ 70,000 ಮಂದಿ ಲೋಕಸಭೆ ಚುವಾಣೆಯಲ್ಲಿ ಮತದಾನ ಮಾಡಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಕೊನೇ ಕ್ಷಣದ ಪ್ರಯತ್ನದಲ್ಲಿ ಇವರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ 2 ಸಾವಿರಕ್ಕೂ ಹೆಚ್ಚು ಯುವ ಮತದಾರರು ಪಟ್ಟಿಗೆ ಸೇರ್ಪಡೆಯಾಗುವ ನಿರೀಕ್ಷೆ ಇದೆ ಎಂದು ಚುನಾವಣಾ ಆಯೋಗ ಹೇಳಿದೆ. ಈಗಷ್ಟೇ 18 ವರ್ಷ ಆದವರಿಗೂ ಚುನಾವಣಾ ಆಯೋಗ ಮತದಾನಕ್ಕೆ ಅವಕಾಶ ನೀಡುವ ಮೂಲಕ ಬರ್ತ್ಡೇ ಗಿಫ್ಟ್ ನೀಡಿದೆ.
2006ರ ಜನವರಿ 1 ಮತ್ತು ಮಾರ್ಚ್ 31 ರ ನಡುವೆ ಜನಿಸಿದವರನ್ನು ಮುಂದಿನ ಕೆಲ ದಿನಗಳಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಒಂದು ವೇಳೆ, ಈಗಷ್ಟೇ 18 ವರ್ಷ ಆದವರಿಗೆ ಈಗ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ನೀಡದಿದ್ದರೆ ಅವರು ಮೊದಲ ಬಾರಿಗೆ ಮತ ಚಲಾಯಿಸಲು ಮುಂದಿನ ಚುನಾವಣೆಯವರೆಗೆ ಕಾಯಬೇಕಾಗುತ್ತದೆ. ಹೀಗಾಗಿ ‘ಫಾರ್ಮ್ 6’ ರ ನಿಬಂಧನೆಯ ಅಡಿಯಲ್ಲಿ ಅವಕಾಶ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರವೂ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಲು ‘ಫಾರ್ಮ್ 6’ರ ಅಡಿಯಲ್ಲಿ ಮುಂಗಡ ಅರ್ಜಿ ಸಲ್ಲಿಸುವ ಅವಕಾಶವಿದೆ. ಈ ಕುರಿತು ಮೊದಲ ಬಾರಿಗೆ ಮಾರ್ಚ್ 21 ರಂದು ವರದಿ ಮಾಡಿದಾಗ, ಸುಮಾರು 50,000 ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ತಿಳಿಸಿದೆ. ಉಳಿದ ಅರ್ಜಿಗಳು ನಂತರ ಸಲ್ಲಿಕೆಯಾಗಿದ್ದವು. ಒಟ್ಟಾರೆಯಾಗಿ, ರಾಜ್ಯದಲ್ಲಿ ಜನವರಿಯಿಂದ 10 ಲಕ್ಷಕ್ಕೂ ಹೆಚ್ಚು ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಈ ಪೈಕಿ 5.9 ಲಕ್ಷ ಮಂದಿ ಏಪ್ರಿಲ್ 26ರಂದ ಮತದಾನ ನಡೆಯುವ ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಕರ್ನಾಟಕದ ಪ್ರಮುಖ 28 ಲೋಕಸಭಾ ಕ್ಷೇತ್ರಗಳ ಪೈಕಿ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತ್ತು ಉತ್ತರ ಕರ್ನಾಟಕದ 14 ಕ್ಷೇತ್ರಗಳಿಗೆ ಮೇ 7 ರಂದು ಮತದಾನ ನಡೆಯಲಿದೆ.