ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳ ಪರ ಮತಯಾಚನೆಯ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು ನಗರದಲ್ಲಿ ರವಿವಾರ ಜನಸಾಗರದ ನಡುವೆ ರಾತ್ರಿ ಹೊತ್ತು ರೋಡ್ ಶೋ ನಡೆಸಿದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎ.26ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ರೋಡ್ ಶೋ ಮೂಲಕ ಮತ ಬೇಟೆಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ಬಿಜೆಪಿಯ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಹರ್ಷೋದ್ಗಾರದೊಂದಿಗೆ ಸ್ವಾಗತಿಸಿದರು.
ಮೈಸೂರಿನಿಂದ ನೇರವಾಗಿ ಮಂಗಳೂರು ವಿಮಾನದ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ನಿಗದಿತ ಸಮಯಕ್ಕೂ 9 ನಿಮಿಷ ಮುಂಚಿತವಾಗಿ ನಗರದ ಲೇಡಿಹಿಲ್‌ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ ವಿಶೇಷ ವಾಹನದಲ್ಲಿ ಆಗಮಿಸಿದ್ದರು. ಸರಿಯಾಗಿ 7.36ಕ್ಕೆ ನಾರಾಯಣ ಗುರು ವೃತ್ತದ ಬಳಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 7.39ಕ್ಕೆ ನಾರಾಯಣ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಿ ರೋಡ್ ಶೋಗಾಗಿ ಸಿದ್ಧಪಡಿಸಲಾಗಿದ್ದ ವಾಹನ ಏರಿದರು.
ಬಿಳಿ ಬಣ್ಣದ ಕುರ್ತಾದ ಮೇಲೆ ನೀಲಿ ಬಣ್ಣದ ಓವರ್‌ಕೋಟ್ ತಲೆಯಲ್ಲಿ ಕೇಸರಿ ಟೋಪಿ ಧರಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕೈಯ್ಯಲ್ಲಿ ಕಮಲದ ಚಿಹ್ನೆಯನ್ನು ಹಿಡಿದು ರಸ್ತೆಯುದ್ದಕ್ಕೂ ಸೇರಿದ್ದ ಜನರತ್ತ ಕೈಬೀಸುತ್ತಾ ಸಾಗಿದರು. ಅವರ ಜತೆ ದ.ಕ. ಜಿಲ್ಲೆಯ ಬಿಜೆಪಿ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿದ್ದರು.
ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ದ ದಾರಿಯುದ್ಧಕ್ಕೂ ಪುಷ್ಪವೃಷ್ಟಿ ಮಾಡಲಾಯಿತು. ಇದಕ್ಕಾಗಿ ಸುಮಾರು 2 ಟನ್ ಹೂವಿನ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಮೋದಿ ರೋಡ್ ಶೋ ಸಾಗುವ ದಾರಿಯ ಅಲ್ಲಲ್ಲಿ ವೇದಿಕೆ ನಿರ್ಮಿಸಿ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಹುಲಿವೇಷ, ಕಂಬಳದ ಪ್ರತಿಕೃತಿ, ಯಕ್ಷಗಾನ, ದೈವಾರಾಧನೆ ವೀಡಿಯೋಗಳನ್ನೂ ಪ್ರದರ್ಶಿಸಲಾಯಿತು. ರೋಡ್ ಶೋ ದ ರಸ್ತೆಯುದ್ದಕ್ಕೂ ಮೋದಿ ಮುಖವಾಡ, ತಲೆಯಲ್ಲಿ ಕಮಲದ ಚಿಹ್ನೆಯ ಕೇಸರಿ ಟೋಪಿ, ಹೆಗಲಲ್ಲಿ ಕೇಸರಿ ಶಾಲು ಹೊತ್ತ ಅಭಿಮಾನಿಗಳು, ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದರು. ಸಾರ್ವಜನಿಕರಿಗೆ ಅಲ್ಲಲ್ಲಿ ಮಜ್ಜಿಗೆ ವಿತರಣೆ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಎಸ್‌ಪಿಜಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಸಾವಿರಕ್ಕೂ ಅಧಿಕ ಪೊಲೀಸರು ಭದ್ರತೆ ಕಾರ್ಯ ನಿರ್ವಹಿಸಿದರು.