ಮಂಗಳೂರು: ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಕಾರ್ಯಕ್ರಮದ ಬಳಿ ಕಟ್ಟಡವೊಂದರಲ್ಲಿ ಅಗ್ನಿ ದುರಂತವಾದ ಘಟನೆ ಎ.14 ರಂದು ಸಂಜೆ 7.05ರ ಸುಮಾರಿಗೆ ನಡೆದಿದೆ.
ಪ್ರಧಾನ ಮಂತ್ರಿಗಳ ರೋಡ್ ಶೋ ಆರಂಭವಾಗುವ ಕೆಲಹೊತ್ತಿನ ಮುಂಚೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿಯ ಎರಡು ಅಂತಸ್ತುಗಳ ಕಟ್ಟಡವೊಂದರಲ್ಲಿ ಈ ಅಗ್ನಿ ದುರಂತ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ನಾಯಕ್ ಡಿಸ್ಟ್ರಿಬ್ಯೂಟರ್ಸ್ ಎಂಬ ಔಷಧಿಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿಗೆ ಬೆಂಕಿ ತಗುಲಿದ್ದು ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಕವಾಗಿ ಹತ್ತಿಕೊಂಡಿದೆ. ಔಷಧಿಗಳು ಸುಟ್ಟು ಕರಕಲಾಗಿದೆ.
ನಗರದ ಬಿಜೈ ಕೆಎಸ್ಆರ್ಟಿಸಿ ಬಳಿಯ ಸುರಭಿ ಹೋಟೇಲ್ ಪಕ್ಕದ ಹಳೆಯ ಕಟ್ಟಡವೊಂದರ ಮೊದಲ ಮಹಡಿಯಲ್ಲಿ ಈ ದುರಂತ ಸಂಭವಿಸಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಅಗ್ನಿ ಶಾಮಕದಳದ ಸಿಬ್ಬಂದಿಗಳು ಒಂದು ಗಂಟೆಗೂ ಹೆಚ್ಚಿನ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ಶಮನಗೊಳಿಸಿದ್ದಾರೆ. ಸುಮಾರು 25 ಲಕ್ಷ ರೂಪಾಯಿಯಷ್ಟು ನಷ್ಟ ಸಂಭವಿಸಿರುವುದಾಗಿ ಹೇಳಲಾಗಿದೆ.