ಬಿಜೆಪಿಯೊಂದಿಗೆ ಜೆ.ಡಿ.ಎಸ್ ಮೈತ್ರಿ – ಸುಳ್ಯ ತಾಲೂಕು ಜೆ.ಡಿ.ಎಸ್ ಮುಸ್ಲಿಂ ಮುಖಂಡರುಗಳ ಸಾಮೂಹಿಕ ರಾಜೀನಾಮೆ – ಶೀಘ್ರದಲ್ಲೇ ಕಾಂಗ್ರೆಸ್‌ ಸೇರ್ಪಡೆ

ಮಂಗಳೂರು/ಸುಳ್ಯ: ಸುಮಾರು 40 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿದ್ದೇವೆ. ಇದೀಗ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ಜೆಡಿಎಸ್ ಪಕ್ಷದಲ್ಲಿ ದುಡಿದದ್ದು ಭವಿಷ್ಯವನ್ನೇ ಹಾಳು ಮಾಡಿದಂತಾಗಿದೆ ಎಂದು ಕರ್ನಾಟಕ ರಾಜ್ಯ ಜೆಡಿಎಸ್ ಕಾರ್ಯದರ್ಶಿ ಮೊಹಮ್ಮದ್ ಇಕ್ಬಾಲ್ ಎಲಿಮಲೆ ಹೇಳಿದ್ದಾರೆ.

ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಯ ತಾಲೂಕಿನ ಜನತಾದಳ ರಾಜ್ಯ ಸಮಿತಿ ಜಿಲ್ಲಾ ಸಮಿತಿ ತಾಲೂಕು ಸಮಿತಿಯ ಪದಾಧಿಕಾರಿಗಳಾಗಿ ಸುಮಾರು 40 ವರುಷಗಳಿಂದ ಪಕ್ಷದಲ್ಲಿ ಜಾತ್ಯಾತೀತ ಸಿದ್ಧಾಂತ ಸಾಮಾಜಿಕ ನ್ಯಾಯದ ನಿಲುವಿಗೆ ಬದ್ಧರಾಗಿ ಪಕ್ಷದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುತ್ತೇವೆ. ಪಕ್ಷದ ರಾಜಕೀಯ ತೀರ್ಮಾನವಾದ ಎನ್ ಡಿ ಎ ಒಕ್ಕೂಟದೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡಿರುವುದನ್ನು ಒಪ್ಪಿಕೊಳ್ಳಲು ಅಸಾಧ್ಯವಾಗಿರುವುದರಿಂದ ಜನತಾದಳ ಜಾತ್ಯಾತೀತ ಪಕ್ಷದಲ್ಲಿ ತೊಡಗಿಸಿಕೊಳ್ಳಲು ನಮಗೆ ಅಸಾಧ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕರಾದ ನಾವೆಲ್ಲರೂ ಒಟ್ಟಾಗಿ ಜನತಾದಳ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇವೆ.  ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ, ರಾಜ್ಯಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಲಾಗಿದೆ.

ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ, ಸೇರ್ಪಡೆಗೊಳ್ಳುವಂತೆ ಆಹ್ವಾನ ನೀಡಿರುತ್ತಾರೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಆಡಳಿತಕ್ಕೆ ಬಂದ ನಂತರ ಸರಕಾರದ ಜನಪರ ಕಾರ್ಯಕ್ರಮಗಳೊಂದಿಗೆ ರಾಜ್ಯದ ಜನತೆ ಸಾಮಾಜಿಕ ನ್ಯಾಯ ಶಾಂತಿ ಸೌಹಾರ್ದತೆ ಸಾಮರಸ್ಯದ ಬದುಕನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪಕ್ಷದ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಸೇರಿದಂತೆ ಬಿ ರಮಾನಾಥ ರೈ, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಟಿ.ಎಂ. ಶಹೀದ್, ಭರತ್ ಮುಂಡೋಡಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್, ಎಮ್. ವೆಂಕಪ್ಪಗೌಡ, ಜಯಪ್ರಕಾಶ್ ರೈ, ಸದಾನಂದ ಮಾವಾಜಿ, ಪಿ.ಎಸ್. ಗಂಗಾಧರ ಮೊದಲಾದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ನಾವೆಲ್ಲರೂ ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುವ ಬಗ್ಗೆ ತೀರ್ಮಾನವನ್ನು ಕೈಗೊಂಡಿರುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ವೇಳೆ ಪ್ರತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸುಳ್ಯ ನಗರ ಪಂಚಾಯತಿ ಸದಸ್ಯ ಕೆ ಎಸ್ ಉಮ್ಮರ್, ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗುವ ದಿನದಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಾಯಕರಾದ ಹಾಜಿ ಉಮರ್ ಗೂನಡ್ಕ, ಕೆ ಎ ಉಮ್ಮರ್ ಫಾರೂಕ್ ಕಳಂಜ, ಎನ್ ಇಸ್ಮಾಯಿಲ್ ಕಳಂಜ, ಎಬಿ ಮೋಹಿದೀನ್, ಇಬ್ರಾಹಿಂ ಕೊಳಂಬೆ, ಖಾದರ್ ಮೊಟ್ಟೆಂಗರ್, ಇಬ್ರಾಹಿಂ ಹಾಜಿ ಕತ್ತರ್ ಮಂಡೆಕೋಲು, ಕೆಎಂ ಮಹಮ್ಮದ್ ಹಾಜಿ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here