ಈಶ್ವರಪ್ಪಗೆ ಏ.22 ಡೆಡ್ ಲೈನ್: ನಾಮಪತ್ರ ವಾಪಸ್ ಪಡೆಯದಿದ್ರೆ ಬಿಜೆಪಿಯಿಂದ ಶಿಸ್ತು ಕ್ರಮ ?

ಮಂಗಳೂರು/ಶಿವಮೊಗ್ಗ:  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಬಿಎಸ್ ವೈ ಕುಟುಂಬದಿಂದ ಬಿಜೆಪಿಯನ್ನು ಮುಕ್ತಗೊಳಿಸಬೇಕು ಎಂದು ಪಣ ತೊಟ್ಟಿರುವ ಈಶ್ವರಪ್ಪ ಕಳೆದ ವಾರ ತಮ್ಮ ನಾಮಪತ್ರವನ್ನೂ ಸಲ್ಲಿಕೆ ಮಾಡಿದ್ದರು. ಇದರ ಬೆನ್ನಲ್ಲೇ ಬಿವೈ ರಾಘವೇಂದ್ರ ಮುಂದಿನ ದಿನಗಳಲ್ಲಿ ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ಹೇಳಿಕೆ ನೀಡಿದ್ದು, ಬ್ರಹ್ಮನೇ ಬಂದು ಹೇಳಿದರೂ ನಾನು ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದರು. ಈ ಹಿಂದೆ ಈಶ್ವರಪ್ಪರಿಗೆ ಹೈಕಮಾಂಡ್ ದೆಹಲಿಗೆ ಬರುವಂತೆ ಬುಲಾವ್ ನೀಡಿತ್ತು. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈಶ್ವರಪ್ಪರ ಭೇಟಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಬೇಸರದಿಂದ ಬಂದಿದ್ದ ಈಶ್ವರಪ್ಪ ನಂತರ ನಾನು ಶಿವಮೊಗ್ಗದಿಂದ ಸ್ಪರ್ಧಿಸೇ ತೀರುತ್ತೇನೆ ಎಂದು ಹಠ ತೊಟ್ಟಿದ್ದಾರೆ.

ಇನ್ನು ಈಶ್ವರಪ್ಪ ಮನವೊಲಿಕೆ ಮಾಡುವ ಕೆಲಸವನ್ನು ಬಿಜೆಪಿ ಹೈಕಮಾಂಡ್ ಕೈಬಿಟ್ಟಿದೆ. ಅಲ್ಲದೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು ಏ.22ರೊಳಗೆ ಈಶ್ವರಪ್ಪ ನಾಮಪತ್ರ ವಾಪಸ್ ಪಡೆಯದಿದ್ದರೆ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಕ್ರಮಕ್ಕೆ ಹೈಕಮಾಂಡ್ ಮುಂದಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಈಶ್ವರಪ್ಪ ಅವರು ನಾಮಪತ್ರ ವಾಪಸ್ ಪಡೆಯದಿದ್ದರೆ ಪಕ್ಷ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here