ಗುಂಡಿನ ದಾಳಿ ಬಗ್ಗೆ ಸಲ್ಮಾನ್‌ ಖಾನ್‌ ಸಹೋದರನ ಹೇಳಿಕೆ – ಪ್ರಕರಣ ಸಂಬಂಧ ಇಬ್ಬರ ಬಂಧನ

ಮಂಗಳೂರು:  ಬಾಲಿವುಡ್​ ನಟ ಸಲ್ಮಾನ್​ ಖಾನ್​ ಮನೆ ಮೇಲೆ ಏ.14ರಂದು ಗುಂಡಿನ ದಾಳಿ ನಡೆದಿದ್ದು, ಎಲ್ಲರಲ್ಲೂ ಆತಂಕ ಮೂಡಿಸಿತ್ತು. ಏ.15ರಂದು ಸಂಜೆ ಮೊದಲ ಬಾರಿಗೆ ಸಲ್ಮಾನ್​ ಖಾನ್​ ಕುಟುಂಬದವರು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಕೆಲವು ಗಾಳಿಸುದ್ದಿಗಳಿಗೆ ಸ್ಪಷ್ಟನೆ ನೀಡಲಾಗಿದ್ದು, ದಾಳಿಯ ಬಗ್ಗೆ ಸಲ್ಮಾನ್​ ಖಾನ್​ ತಂದೆ ಸಲೀಂ ಖಾನ್​ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

‘ಇಬ್ಬರು ಅಪರಿಚಿತರು ಬೈಕ್​ನಲ್ಲಿ ಬಂದು ಸಲೀಂ ಖಾನ್​ ಕುಟುಂಬದ ನಿವಾಸವಾದ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಮೇಲೆ ಗುಂಡಿನ ದಾಳಿ ಮಾಡಿದ್ದು ಆಘಾತಕಾರಿ ಸಂಗತಿಯಾಗಿದೆ. ಈ ಘಟನೆಯಿಂದ ನಮ್ಮ ಕುಟುಂಬಕ್ಕೆ ಆತಂಕ ಆಗಿದೆ. ದುರದೃಷ್ಟಕರ ವಿಷಯ ಏನೆಂದರೆ, ಕೆಲವು ವ್ಯಕ್ತಿಗಳು ನಮ್ಮ ಕುಟುಂಬದ ಆಪ್ತರು ಎಂದು ಹೇಳಿಕೊಂಡು ಮಾಧ್ಯಮಗಳಲ್ಲಿ ಲಘುವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಘಟನೆ ಒಂದು ಪ್ರಚಾರದ ಗಿಮಿಕ್​ ಮತ್ತು ಇದರಿಂದ ಸಲ್ಮಾನ್​ ಖಾನ್​ ಕುಟುಂಬದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದೆಲ್ಲ ಹೇಳಿದ್ದಾರೆ. ಆದರೆ ಅದು ನಿಜವಲ್ಲ. ಅಂಥವರ ಮಾತನ್ನು ಗಂಭೀರವಾಗಿ ಪರಿಗಣಿಸಬಾರದು’ ಎಂದು ಸಲ್ಲು ಕುಟುಂಬದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಸಲೀಂ ಖಾನ್​ ಕುಟುಂಬದ ಯಾರೂ ಕೂಡ ಮಾಧ್ಯಮಗಳಿಗೆ ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಈ ಸಮಯದಲ್ಲಿ ಕುಟುಂಬದವರು ಪೊಲೀಸರ ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ನಮಗೆ ಮುಂಬೈ ಪೊಲೀಸರ ಮೇಲೆ ನಂಬಿಕೆ ಇದೆ. ನಮ್ಮ ಕುಟುಂಬಕ್ಕೆ ರಕ್ಷಣೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. ಬೆಂಬಲ ಮತ್ತು ಪ್ರೀತಿ ನೀಡಿದ ಎಲ್ಲರಿಗೂ ಧನ್ಯವಾದಗಳು’ ಎಂದು ಸಲ್ಮಾನ್ ಖಾನ್​ ಸಹೋದರ ಅರ್ಬಾಜ್​ ಖಾನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇನ್ನೊಂದೆಡೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಿವಾಸದ ಹೊರಗೆ ಗುಂಡು ಹಾರಿಸಿದ ಪ್ರಕರಣ ಸಂಬಂಧ ಮುಂಬೈ ಕ್ರೈಂ ಬ್ರಾಂಚ್ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ವಿಕ್ಕಿ ಗುಪ್ತಾ ಹಾಗೂ ಸಾಗರ್ ಪಾಲ್ ಬಂಧಿತ ಆರೋಪಿಗಳು. ಗುಂಡು ಹಾರಿಸಿ ಪರಾರಿಯಾಗಿದ್ದ ಆರೋಪಿಗಳನ್ನು ಎ.15ರ ರಾತ್ರಿ ಗುಜರಾತ್‌ನ ಭುಜ್‌ನಲ್ಲಿ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಖಚಿತಪಡಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಅವರನ್ನು ಮುಂಬೈಗೆ ಕರೆತರಲಾಗುವುದು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here