ಬೈಕ್​ಗೆ ಡಿಕ್ಕಿ ಹೊಡೆದ ಲಾರಿ-ಬೈಕ್ ಚಾಲಕನ ಸಮೇತ ದೂರಕ್ಕೆ ಎಳೆದೊಯ್ದ ಲಾರಿ-ವೈರಲಾದ ಎದೆ ಝೆಲ್ಲೆನಿಸುವ ವಿಡಿಯೋ

ಮಂಗಳೂರು(ಹೈದರಾಬಾದ್): ಇತ್ತೀಚೆಗೆ ಅಪಘಾತಗಳು ಹಾಗೂ ಹಿಟ್​ ಆ್ಯಂಡ್​ ರನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಟ್ರಕ್​ವೊಂದು ಬೈಕ್​ಗೆ ಡಿಕ್ಕಿ ಹೊಡೆದು ಚಾಲಕನ ಸಮೇತ ಎಳೆದೊಯ್ದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಟ್​ ಆ್ಯಂಡ್ ರನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೇಗವಾಗಿ ಬಂದ ಲಾರಿಯೊಂದು ಜನನಿಬಿಡ ಪ್ರದೇಶದಲ್ಲಿ ಬೈಕ್​ಗೆ ಡಿಕ್ಕಿ ಹೊಡೆದು ಅದರ ಮುಂಭಾಗದ ಟೈರ್ ಅಡಿಯಲ್ಲಿ ಎಳೆದುಕೊಂಡು ಹೋಗುವುದನ್ನು ವಿಡಿಯೋ ತೋರಿಸುತ್ತದೆ.

ಆದರೆ ಪುಣ್ಯಕ್ಕೆ ಆ ಬೈಕ್ ಸವಾರ ಹೇಗೋ ಮಾಡಿ ಬೈಕ್​ನಿಂದ ತಪ್ಪಿಸಿಕೊಂಡು ಲಾರಿಯ ಬದಿಯನ್ನು ಹಿಡಿದು ನೇತಾಡುತ್ತಿರುವುದನ್ನು ಕಾಣಬಹುದು. ಸ್ವಲ್ಪ ದೂರ ಹೋಗ ಬಳಿಕ ಲಾರಿ ಚಕ್ರಕ್ಕೆ ಸಿಲುಕಿದ್ದ ಬೈಕ್​ ಬೇರ್ಪಡುತ್ತದೆ. ಈ ಲಾರಿಯು ಬೈಕ್​ಗೆ ಡಿಕ್ಕಿ ಹೊಡೆದು ಸ್ವಲ್ಪ ಸಮಯದ ಬಳಿಕ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆ ಏಪ್ರಿಲ್​ 14ರಂದು ನಡೆದಿದ್ದು, ಏಪ್ರಿಲ್ 15ರಂದು ಹೈದರಾಬಾದ್ ನಿವಾಸಿ ಅಬ್ದುಲ್ ಮಜೀದ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಏಪ್ರಿಲ್​ 14ರಂದು ರಾತ್ರಿ 11 ಗಂಟೆ ಸುಮಾರಿಗೆ ಚಂಪಾಪೇಟೆಯ ಲಕ್ಷ್ಮೀ ಗಾರ್ಡನ್ ಕಡೆಗೆ ಬೈಕ್​ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಅತಿವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿತ್ತು.

ಡಿಕ್ಕಿಯ ನಂತರ ರಸ್ತೆಯ ಎಡಭಾಗದಲ್ಲಿ ಬಿದ್ದಿದ್ದಾರೆ, ಆಗ ಟ್ರಕ್ ಚಾಲಕ ವಾಹನವನ್ನು ನಿಲ್ಲಿಸದೆ ಓಡಿ ಹೋಗಲು ಯತ್ನಿಸಿದ್ದರು, ಈ ಘಟನೆಯ ವಿಡಿಯೋವನ್ನು ಹಿಂದೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರು ಮಾಡಿದ್ದಾರೆ. ಸವಾರನಿಗೆ ಗಾಯವಾಗದಿದ್ದರೂ ಆತನ ದ್ವಿಚಕ್ರವಾಹನವನ್ನು ಸುಮಾರು ದೂರ ಎಳೆದುಕೊಂಡು ಹೋಗಿದ್ದು, ಇದರಿಂದ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದೆ. ನಂತರ ಅದೇ ಟ್ರಕ್​ ಚಂಪಾಪೇಟ್ ಟಿ ಜಂಕ್ಷನ್​ನಲ್ಲಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಗೆ ಅತಿಯಾದ ವೇಗವೇ ಕಾರಣ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here