ಮಂಗಳೂರು: ನಾರಾಯಣ ಗುರು ವೃತ್ತ ನಿರ್ಮಾಣಕ್ಕೆ ಇದ್ದ ವಿರೋಧ ಲೆಕ್ಕಿಸದೇ ಹೋರಾಡಿದ್ದು ನಾವು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮಕ್ಕೆ ನಮ್ಮನ್ನು ಬನ್ನಿ ಎಂದೂ ಕರೆದಿಲ್ಲ. ಇದರಿಂದ ಬೇಸರವಾಗಿದೆ ಎಂದು ‘ಬಿರುವೆರ್ ಕುಡ್ಲ’ ಸಂಘಟನೆಯ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವೃತ್ತ ನಿರ್ಮಾಣಕ್ಕೆ ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಮೂರು ಸಲ ಸಲ್ಲಿಸಿದ್ದ ಮನವಿಗಳೂ ತಿರಸ್ಕೃತಗೊಂಡಿದ್ದವು. ಬಿಜೆಪಿ ನೇತೃತ್ವದ ಸರ್ಕಾರವೂ ವೃತ್ತ ನಿರ್ಮಿಸದಿದ್ದಾಗ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ವೇದವ್ಯಾಸ ಕಾಮತ್ ಹಾಗೂ ಬಿಜೆಪಿಯ ಇತರ ಶಾಸಕರಿಗೆ 200ಕ್ಕೂ ಹೆಚ್ಚು ಬಿಲ್ಲವ ಸಂಘಗಳು ಮನವಿ ಸಲ್ಲಿಸಿವೆ. ಈ ವೃತ್ತಕ್ಕಾಗಿ ಹೋರಾಡಿದ ನಾವೇ ಈಗ ಅವರಿಗೆ ಬೇಡವಾದೆವು. ತೊಂದರೆ ಇಲ್ಲ ಎಂದು ನೋವಿನಿಂದ ಹೇಳಿದ್ದಾರೆ. ಚುನಾವಣೆ ಸಲುವಾಗಿ ನಾರಾಯಣಗುರು ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ನಮಗೆ ಗೊತ್ತಿಲ್ಲ. ನಮ್ಮನ್ನು ಕರೆಯಲಿಲ್ಲ ಎಂಬುದಷ್ಟೇ ನಮಗೆ ಬೇಸರ. ಬಿಲ್ಲವರು ಆರಾಧನೆ ಮಾಡುವುದು ಕುದ್ರೋಳಿ ಕ್ಷೇತ್ರವನ್ನು. ಅಲ್ಲಿನ ಅಧ್ಯಕ್ಷ ಸಾಯಿರಾಂ ಅವರನ್ನಾದರೂ ಆಹ್ವಾನಿಸಿದ್ದರೂ ಸಾಕಿತ್ತು. ನಮ್ಮ ಸಮುದಾಯದವರಿಗೂ ಈ ಬಗ್ಗೆ ತುಂಬಾ ಬೇಸರವಿದೆ ಎಂದರು.
ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಸಂಘದ ಮುಖಂಡರು ಅಥವಾ ಪಕ್ಷದವರು ಹೋಗಿದ್ದರೆ ಬೇಸರ ಆಗುತ್ತಿರಲಲ್ಲ. ಆದರೆ ಉದ್ಯಮಿಗಳು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಅವಕಾಶ ಕಲ್ಪಿಸಲಾಗಿದೆ. ನಗರದ ಪ್ರಥಮ ಪ್ರಜೆ ಸುಧೀರ್ ಶೆಟ್ಟಿಯವರನ್ನೂ ಕರೆಯಲಿಲ್ಲ ಎಂದರು. ಪಕ್ಷದಲ್ಲಿ ನಳಿನ್ ಹಾಗೂ ಬ್ರಿಜೇಶ್ ಚೌಟ ಅವರ ಬಣಗಳು ನಿರ್ಮಾಣವಾಗಿದೆ. ನಳಿನ್ ಜೊತೆ ಇದ್ದವರಿಗೆ ಪಕ್ಷದಲ್ಲಿ ಯಾವುದೇ ಜವಾಬ್ದಾರಿಯನ್ನೂ ನೀಡದೇ ಕಡೆಗಣಿಸಲಾಗುತ್ತಿದೆ. ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಅವರಿಗೆ ಟಿಕೆಟ್ ಸಿಗುವುದೇ ಕಷ್ಟ ಎಂಬ ಮಾತು ಕೇಳಿ ಬರುತ್ತಿದೆ. ಈ ತರಹ ಆಗಬಾರದು. ಇದರಿಂದ ಚುನಾವಣೆ ಮೇಲೆ ಪರಿಣಾಮ ಉಂಟಾಗುತ್ತದೋ ಇಲ್ಲವೋ ಗೊತ್ತಿಲ್ಲ. ಬಣ ರಾಜಕೀಯದ ಬಗ್ಗೆ ಪಕ್ಷದೊಳಗೆ ಬೇಸರವಿರುವುದು ನಿಜ. ಕಾರ್ಯಕರ್ತರು ಫ್ಲೆಕ್ಸ್ ಬಂಟಿಂಗ್ಸ್ ಕಟ್ಟಲು ಸೀಮಿತ ಅಲ್ಲ. ಅವರನ್ನು ಗುರುತಿಸುವ ಕೆಲಸ ಆಗಬೇಕು ಎಂದರು.
ಈ ವೃತ್ತ ನಿರ್ಮಾಣಕ್ಕೆ ಹರೀಶ್ ಪೂಂಜ, ವೇದವ್ಯಾಸ ಕಾಮತ್ ಬೆಂಬಲ ನೀಡಿದ್ದರು. ಸಮುದಾಯವನ್ನು ನೋಡದೇ ಅವರನ್ನು ಬೆಂಬಲಿಸಿದ್ದೆವು. ಈ ಸಲ ನಾನು ಪ್ರಚಾರಕ್ಕೆ ಹೋಗಲ್ಲ. ಯಾರು ಒಳ್ಳೆ ಕೆಲಸ ಮಾಡುತ್ತಾರೆಯೋ ಅವರನ್ನು ಜನ ಗೆಲ್ಲಿಸುತ್ತಾರೆ. ರಾಜಕೀಯ ಮಹತ್ವಾಕಾಂಕ್ಷೆ ಇಟ್ಟುಕೊಂಡವ ನಾನಲ್ಲ. ನಮ್ಮದೇನಿದ್ದರೂ ಸಮಾಜಮುಖಿ ಕೆಲಸ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ವೃತ್ತ ನಿರ್ಮಾಣವಾಗುವಾಗ ಸತೀಶ್ ಕುಂಪಲ ಎಲ್ಲಿದ್ದರು. ಬಿಲ್ಲವ ಸಮುದಾಯಕ್ಕೆ ಅವರ ಕೊಡುಗೆ ಏನಿದೆ. ರಾಜಕೀಯಕ್ಕಾಗಿ ಏನು ಬೇಕಾದರೂ ಹೇಳಿಕೆ ನೀಡುತ್ತಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ವಿರುದ್ಧವೂ ಉದಯ್ ಪೂಜಾರಿ ಹರಿಹಾಯ್ದರು. ನಳಿನ್ ಅವರಿಗೆ ನನ್ನ ಬಗ್ಗೆ ಹೇಳಿ ಎಂದು ಸತೀಶ್ ಕುಂಪಲ ವಿಧಾನ ಸಭೆ ಚುನವಣೆಗೆ ಮುನ್ನ ನನಗೆ ಫೋನ್ ಮಾಡುತ್ತಿದ್ದರು. ಆಗ ನಾವು ಬೇಕಾಗಿತ್ತು. ಈಗ ಬೇಡವಾಗಿದೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹುದ್ದೆಯ ಅವಧಿ ಮೂರು ವರ್ಷ ಮಾತ್ರ. ನಂತರ ನಮ್ಮಂತೆಯೇ ಸಾಮಾನ್ಯ ಕಾರ್ಯಕರ್ತರಾಗಿಯೇ ಇರಬೇಕು ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು ಎಂದರು.