ಕಾರ್‌ ರೇಸ್ ನಲ್ಲೊಂದು ದುರಂತ- ರೇಸ್‌ ಕಾರು ಹರಿದು 7 ಸಾವು ,20ಮಂದಿಗೆ ಗಾಯ

ಮಂಗಳೂರು: ಕಾರು ರೇಸ್‌ ಸ್ಪರ್ಧೆಯ ಸಂದರ್ಭದಲ್ಲಿ ಕಾರೊಂದು ಟ್ರ್ಯಾಕ್‌ ನಿಂದ ಹೊರಬಂದು ಜನರ ಮೇಲೆ ಹರಿದ ಪರಿಣಾಮ 7 ಮಂದಿ ಮೃತಪಟ್ಟು, 20 ಮಂದಿ ಗಾಯಗೊಂಡಿರುವ ಘಟನೆ ಶ್ರೀಲಂಕಾದಲ್ಲಿ ಭಾನುವಾರ(ಏ.21 ರಂದು) ನಡೆದಿದೆ.

ಶ್ರೀಲಂಕಾದ ರಾಜಧಾನಿ ಕೊಲಂಬೊದಿಂದ ಪೂರ್ವಕ್ಕೆ 180 ಕಿಲೋಮೀಟರ್ ದೂರದಲ್ಲಿರುವ ಚಹಾ ಬೆಳೆಯುವ ಕೇಂದ್ರ ಬೆಟ್ಟಗಳಲ್ಲಿರುವ ದಿಯಾತಲಾವಾ ಪಟ್ಟಣದಲ್ಲಿ ಕಾರು ರೇಸ್‌ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯನ್ನು ನೋಡಲು ಸಾವಿರಾರು ಪ್ರೇಕ್ಷಕರು ಸೇರಿದ್ದರು.

ಈ ಸಂದರ್ಭದಲ್ಲಿ ರೇಸ್‌ ನಲ್ಲಿ ಭಾಗಿಯಾಗಿದ್ದ ಕಾರೊಂದು ನಿಯಂತ್ರಣ ತಪ್ಪಿ ರೇಸ್‌ ಟ್ರ್ಯಾಕ್‌ ನಿಂದ ಹೊರಬಂದು ನೆರೆದಿದ್ದ ಜನರ ಮೇಲೆ ಹರಿದಿದೆ. ಪರಿಣಾಮ ನಾಲ್ವರು ಅಧಿಕಾರಿಗಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ20 ಜನರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .
ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಪೊಲೀಸ್ ವಕ್ತಾರ ನಿಹಾಲ್ ತಲ್ದುವಾ ತಿಳಿಸಿದ್ದಾರೆ.

ಶ್ರೀಲಂಕಾದ ಮಿಲಿಟರಿ ಅಕಾಡೆಮಿಯ ರೇಸ್ ಸರ್ಕ್ಯೂಟ್‌ನಲ್ಲಿ ಸುಮಾರು 45,000 ಪ್ರೇಕ್ಷಕರು ಜಮಾಯಿಸಿದ್ದರು. ಈವೆಂಟ್ ನ್ನು ಶ್ರೀಲಂಕಾ ಸೇನೆ ಮತ್ತು ಶ್ರೀಲಂಕಾ ಆಟೋಮೊಬೈಲ್ ಸ್ಪೋರ್ಟ್ಸ್ ಆಯೋಜಿಸಿತ್ತು.

LEAVE A REPLY

Please enter your comment!
Please enter your name here