ಅದೇ ಕಾಂಟ್ರಾಕ್ಟರ್…ಅದೇ ರಾಜ್ಯ-2021ರಲ್ಲಿ ಸೇತುವೆ ಮಳೆಗೆ ಬಲಿ-2024ರಲ್ಲಿ ಮತ್ತೊಂದು ಸೇತುವೆ ಗಾಳಿಗೆ ಬಲಿ

ಮಂಗಳೂರು(ಹೈದರಾಬಾದ್): ತೆಲಂಗಾಣದ ಪೆದ್ದಪ್ಪಲ್ಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯೊಂದು ಗಾಳಿಗೆ ಕುಸಿದ ಘಟನೆ ಬೆಳಕಿಗೆ ಬಂದಿದೆ. ಸೇತುವೆ ಎರಡು ಪಿಲ್ಲರ್ ನಡುವೆ ಇದ್ದ ಐದು ಕಾಂಕ್ರೀಟ್ ಸ್ಲ್ಯಾಬ್​ಗಳ ಪೈಕಿ ಎರಡು ಸ್ಲ್ಯಾಬ್​​ಗಳು ಕುಸಿದಿವೆ. ಸೋಮವಾರ ರಾತ್ರಿ 9:45ಕ್ಕೆ ಈ ಘಟನೆ ಸಂಭವಿಸಿದೆ. ಬಲವಾಗಿ ಗಾಳಿ ಬೀಸಿದ ಪರಿಣಾಮ ನಿರ್ಮಾಣ ಹಂತದ ಈ ಸೇತುವೆ ಭಾಗಶಃ ಕುಸಿದಿರುವುದು ಗೊತ್ತಾಗಿದೆ. ಇನ್ನುಳಿದ ಭಾಗವೂ ಕೂಡ ಯಾವಾಗ ಬೇಕಾದರೂ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಸೇತುವೆ ಕುಸಿಯುವ ಒಂದು ನಿಮಿಷ ಮುಂಚೆಯಷ್ಟೇ ಬಸ್ಸೊಂದು ಕೆಳಗೆ ಹಾದು ಹೋಗಿತ್ತು. ಮದುವೆ ಕಾರ್ಯಕ್ರಮದ ಈ ಬಸ್ಸಿನಲ್ಲಿ 65 ಜನರು ಪ್ರಯಾಣಿಸುತ್ತಿದ್ದರು. ಅದೃಷ್ಟಕ್ಕೆ ಈ ಬಸ್ ಸಾಗಿ ಹೋದ ಬಳಿಕ ಸೇತುವೆ ಕುಸಿದಿದೆ. ಎಂಟು ವರ್ಷದ ಹಿಂದೆ 2016ರಲ್ಲಿ ಒಂದು ಕಿಮೀ ಉದ್ದದ ಈ ಸೇತುವೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. 49 ಕೋಟಿ ರೂ ವೆಚ್ಚದಲ್ಲಿ ಸೇತುವೆ ನಿರ್ಮಿಸುವ ಯೋಜನೆ ಇದು. ಭೂಪಾಲಪಲ್ಲಿಯ ಗರಮಿಲ್ಲಪಲ್ಲು ಮತ್ತು ಪೆದ್ದಪಲ್ಲಿಯ ಓದೇದೇಡು ಸ್ಥಳವನ್ನು ಈ ಸೇತುವೆ ಸಂಪರ್ಕಿಸುತ್ತದೆ. ಒಂದು ವರ್ಷದ ಹಿಂದೆಯೇ ಇದರ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಯೋಜನೆಯ ಗುತ್ತಿಗೆದಾರ ಒಂದೆರಡು ವರ್ಷದಲ್ಲೇ ಕೆಲಸ ನಿಲ್ಲಿಸಿದ್ದ ಎನ್ನಲಾಗಿದೆ. ಸ್ಥಳೀಯರ ಪ್ರಕಾರ ಅಧಿಕಾರಿಗಳು ಕಮಿಷನ್​ಗಾಗಿ ಈತನ ಮೇಲೆ ಒತ್ತಾಯ ಹೇರಿದ್ದರು. ಮಾಡಿದ ಕಾಮಗಾರಿಗೆ ಸರ್ಕಾರದಿಂದಲೂ ಈತನಿಗೆ ಹಣ ಬಂದಿರಲಿಲ್ಲ. ಹೀಗಾಗಿ, ಈ ಕಾಂಟ್ರಾಕ್ಟರ್ ಕಾಮಗಾರಿಯನ್ನು ನಿಲ್ಲಿಸಿದ್ದ ಎನ್ನಲಾಗಿದೆ. ಕುತೂಹಲ ಎಂದರೆ ಇದೇ ಗುತ್ತಿಗೆದಾರ ವೇಮುಲವಾಡದಲ್ಲಿ ಕಟ್ಟಿದ ಸೇತುವೆಯೊಂದು 2021ರಲ್ಲಿ ಭಾರೀ ಮಳೆಯಲ್ಲಿ ಕುಸಿದುಹೋಗಿತ್ತು.

 

LEAVE A REPLY

Please enter your comment!
Please enter your name here