ಮಂಗಳೂರು(ಬೆಂಗಳೂರು): ಬೇಸಿಗೆಯ ತಾಪಮಾನ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುತ್ತಲೇ ಇದ್ದು, ಏ.26ರಿಂದ ಏಪ್ರಿಲ್ 30ರವರೆಗೆ ಬಿಸಿಗಾಳಿಯ ಅಲೆ ಹೆಚ್ಚಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಆರೆಂಜ್ ಅಲರ್ಟ್ ಹೊರಡಿಸಿದೆ.
ಭಾರತೀಯ ಹವಾಮಾನ ಇಲಾಖೆ ಮುಂದಿನ ಐದು ದಿನಗಳ ಕಾಲ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಹೆಚ್ಚಾಗಲಿದೆ ಎಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಸಿದೆ. ಕಲ್ಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಕೋಲಾರ ಜಿಲ್ಲೆಗಳಲ್ಲಿ ಬಿಸಿಗಾಳಿಯ ಪ್ರಮಾಣ ಹೆಚ್ಚಾಗಿ ಜನರನ್ನು ಬಾಧಿಸಲಿದೆ. ಬಿಸಿಗಾಳಿಯಿಂದಾಗಿ ಉಂಟಾಗುವ ಸನ್ ಸ್ಟ್ರೋಕ್ ಮತ್ತು ಇತರ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಹೊರಗೆ ಹೋಗಬಾರದು, ತೆಳುವಾದ, ಹಗುರವಾದ ಬಟ್ಟೆಗಳನ್ನು ಧರಿಸಬೇಕು, ನಿರ್ಜಲೀಕರಣವಾಗದಂತೆ ತಡೆಯಲು ಆಗಾಗ ನೀರು ಕುಡಿಯುತ್ತಿರಬೇಕು ಎಂದು ಸೂಚನೆ ನೀಡಲಾಗಿದೆ.