ಮಂಗಳೂರು(ಉತ್ತರಪ್ರದೇಶ): ಆಪರೇಷನ್ ಸಮಯದಲ್ಲಿ ಹೊಟ್ಟೆಯಲ್ಲಿ ಕತ್ತರಿ, ಕೈ ಗ್ಲೌಸ್, ಸಣ್ಣಪುಟ್ಟ ವಸ್ತುಗಳನ್ನು ಬಿಟ್ಟು ಆಪರೇಷನ್ ಮುಗಿಸಿದ ವರದಿಗಳನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಇಲ್ಲೊಬ್ಬ ವೈದ್ಯರು ಆಪರೇಷನ್ ಮಧ್ಯೆ ಹಸಿವಾಯಿತು ಎಂದು ದೋಸೆ ತಿನ್ನಲು ಹೋಗಿ 2 ಗಂಟೆ ಬಳಿಕ ಬಂದು ಆಪರೇಷನ್ ಪೂರ್ಣಗೊಳಿಸಿದ್ದಾನೆ. ಇದರಿಂದ ನನ್ನ ಕೈ ಬೆರಳು ವಕ್ರವಾಗಿದೆ ಎಂದು ಶಸ್ತ್ರಚಿಕಿತ್ಸೆಗೆ ಒಳಗಾದ ಸಂತ್ರಸ್ತೆ ಬಾಲಕಿ ದೂರು ನೀಡಲು ಮುಂದಾಗಿದ್ದಾಳೆ.
ಬಾಲಕಿಗೆ ಕೈಗೆ ಆಪರೇಷನ್ ಮಾಡಲಾಗಿದೆ. ವೈದ್ಯರ ನಿರ್ಲಕ್ಷ್ಯದಿಂದ ಈಗ ಆಕೆಯ ಕೈ ಬೆರಳುಗಳು ವಕ್ರವಾಗುತ್ತಿವೆ. ಇದಕ್ಕೆ ವೈದ್ಯರೇ ಕಾರಣ ಎಂದು ಆಕೆ ದೂರಿದ್ದಾಳೆ. ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ದೂರು ನೀಡಿದರೂ, ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ದೂರು ನೀಡಲು ಆಕೆ ಮುಂದಾಗಿದ್ದಾಳೆ. ಝಾನ್ಸಿಯ ನವಬಾದ್ ಪ್ರದೇಶದ ನಿವಾಸಿ ಕಾಜಲ್ ಶರ್ಮಾ ಆಪರೇಷನ್ಗೆ ಒಳಗಾದ ಬಾಲಕಿ. ಮನೆಯಲ್ಲಿ ಬಿದ್ದಾಗ ಎಡಗೈಗೆ ಗಾಯವಾಗಿತ್ತು. ಗುರುಗಾಂವ್ನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಆದರೆ ಇಲ್ಲಿನ ಡಾಕ್ಟರ್ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದಾರೆ. ಅದರಂತೆ ಕಳೆದ ಡಿಸೆಂಬರ್ 22 ರಂದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ಅಂದು, ಬಾಲಕಿಯನ್ನು ಆಪರೇಷನ್ ಥಿಯೇಟರ್ಗೆ ಕರೆದೊಯ್ದ ಬಳಿಕ ಹಿರಿಯ ವೈದ್ಯರ ಬದಲಿಗೆ ಆತನ ಪುತ್ರ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ ಎಂದು ತಿಳಿದುಬಂದಿತ್ತು. ಇದರಿಂದ ಕುಟುಂಬ ತುಸು ಗಾಬರಿಯಾಗಿದ್ದರೂ ಬಳಿಕ ಇದಕ್ಕೆ ಒಪ್ಪಿದ್ದಾರೆ. ಬಾಲಕಿಯ ಕೈಗೆ ಮತ್ತು ಬರುವ ಇಂಜೆಕ್ಷನ್ ನೀಡಿ, ಆಪರೇಷನ್ ಆರಂಭಿಸಲಾಗಿದೆ. ಚಿಕಿತ್ಸೆಯ ಅರ್ಧದಲ್ಲಿ ವೈದ್ಯರಿಗೆ ಹಸಿವೆ ಕಾಣಿಸಿಕೊಂಡಿದೆ. ಚಿಕಿತ್ಸೆ ಮಧ್ಯೆ ಹಸಿದ ವೈದ್ಯರು ಮಸಾಲೆ ದೋಸೆ ತಿಂದು ಬರುತ್ತೇನೆ ಎಂದು ಹೇಳಿ ಹೋಗಿದ್ದಾರೆ. ಎಚ್ಚರವಾಗಿದ್ದ ಬಾಲಕಿಗೆ ವೈದ್ಯರ ಮಾತು ಸ್ಪಷ್ಟವಾಗಿ ಕೇಳಿಸಿದೆ. ಮಾತ್ರವಲ್ಲ ತನ್ನ ಕೈಗೆ ಮಾಡುತ್ತಿದ್ದ ಶಸ್ತ್ರಚಿಕಿತ್ಸೆಯನ್ನೂ ಆಕೆ ಗಮನಿಸುತ್ತಿದ್ದಳು. ಇತ್ತ ವೈದ್ಯರು ಚಿಕಿತ್ಸೆ ಮಧ್ಯೆಯೇ ಅಲ್ಲಿಂದ ದೋಸೆ ತಿನ್ನಲು ಹೊರಟಿದ್ದು, ಬರೋಬ್ಬರಿ 2 ಗಂಟೆಯ ನಂತರ ವಾಪಸ್ ಬಂದು ಆಪರೇಷನ್ ಪೂರ್ತಿ ಮಾಡಿದ್ದಾರೆ. ಕೈ ನೋವು ವಾಸಿಯಾಗುತ್ತೆ ಎಂದು ಗ್ಯಾರಂಟಿಯನ್ನು ನೀಡಿದ್ದಾರೆ.
ಕೆಲವು ದಿನಗಳ ಬಳಿಕ ಎಡಗೈಯ ಬೆರಳುಗಳು ವಕ್ರವಾಗಲು ಆರಂಭಿಸಿವೆ. ಇದರಿಂದ ಹೆದರಿದ ಬಾಲಕಿ ಕುಟುಂಬ ಅದೇ ಆಸ್ಪತ್ರೆಗೆ ಬಂದು ವಿಚಾರಿಸಿದಾಗ, ವೈದ್ಯರು ಈ ಬಗ್ಗೆ ತಾನು ಹೊಣೆ ಹೊರುವುದಿಲ್ಲ ಎಂದು ತಿಳಿಸಿದ್ದಾರೆ. ನಿಮ್ಮ ನಿರ್ಲಕ್ಷ್ಯದಿಂದಲೇ ಸಮಸ್ಯೆಯಾಗುತ್ತಿದೆ ಎಂದರೂ, ವೈದ್ಯರು ಕ್ಯಾರೇ ಎನ್ನುತ್ತಿಲ್ಲ. ಈಗ ವೈದ್ಯರ ವಿರುದ್ಧ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಯಾವುದೇ ಕ್ರಮಗೊಳ್ಳದ ಕಾರಣ ಎಸ್ಪಿಗೂ ದೂರು ನೀಡಿದ್ದಾರೆ. ಇಲ್ಲಿಯೂ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದೂರು ನೀಡಲು ಮುಂದಾದರೂ ಸಾಧ್ಯವಾಗಿಲ್ಲ. ಸದ್ಯ ಬಾಲಕಿಗೆ ಬೇರೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.