ಮುದ್ರಾರಾಕ್ಷಸನ ಹಾವಳಿ-ಅಬ್ದುಲ್ ನಾಯಿ, ***ಪ್ಪ, ಮಹಮ್ಮದ್‌ ಇಸುಬು ಪ್ರಾಣೇಶ್‌-ವೈರಲ್‌ ಆದ ಮತಚೀಟಿ ಹೆಸರುಗಳು

ಮಂಗಳೂರು: ಕನ್ನಡ ಬರವಣಿಗೆ ಮತ್ತು ಬಳಕೆ ಕಡಿಮೆಯಾಗುತ್ತಿರುವುದರ ನಡುವೆ ಕೆಲವರು ಮಾತು ಮತ್ತು ಕೃತಿಯಲ್ಲಿ ಕನ್ನಡವನ್ನು ಬಳಸುತ್ತಿರುವುದು ಸಂತಸದ ವಿಚಾರ. ಆದರೆ ಬರವಣಿಗೆಯಲ್ಲಿನ ತಪ್ಪು ಅಪಾರ್ಥಕ್ಕೆ ಕಾರಣವಾದ ಹಲವು ಘಟನೆಗಳು ನಮ್ಮ ಮುಂದಿದೆ. ಅಪಘಾತವೊಂದರಲ್ಲಿ ಗಾಯವಾಗಿದ್ದು ಮೂಗಿಗೆ 6 ಹೋಳಿಗೆ(ಹೊಲಿಗೆ) ಹಾಕಲಾಗಿದೆ, ಭಯೋತ್ಪಾದಕರು ಗುದದ್ವಾರದಲ್ಲಿ(ಗುರುದ್ವಾರದಲ್ಲಿ) ಅಡಗಿದ್ದಾರೆ ಎಂದು ಬರೆದವರು ನಮ್ಮ ನಡುವೆ ಇದ್ದಾರೆ. ಈ ಅಕ್ಷರ ತಪ್ಪುಗಳ ಮುಂದೆ ಇದು ಸಣ್ಣ ವಿಚಾರವಾದರೂ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಹೀಗೆ ಮಾಡಿದರೆ ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ. ಲೋಕಸಭಾ ಚುನಾವಣೆಯ ಮಾಹಿತಿ ಚೀಟಿಯಲ್ಲಿ ಬರೆದಿರುವ ಹೆಸರು ವೈರಲ್‌ ಆಗುತ್ತಿದ್ದು, ನಮ್ಮವರ ಕನ್ನಡ ಜ್ಞಾನದ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿದೆ. ಇಷ್ಟಕ್ಕೂ ನಡೆದದ್ದಾದರೂ ಏನು ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ಯಾವುದೇ ಚುನಾವಣೆಗೆ ಮುನ್ನವಾಗಿ ಪ್ರತಿಯೊಬ್ಬ ಮತದಾರನಿಗೂ ಮತದಾನಕ್ಕೆ ಅನುಕೂಲವಾಗುವಂತೆ ಚೀಟಿಯನ್ನು ನೀಡಲಾಗುತ್ತದೆ. ಇದರಂತೆ ಜಿಲ್ಲೆಯ ನೆಟ್ಟಣಿಗೆ ಮುಡ್ನೂರು ಗ್ರಾಮದ ಗೋಳಿತ್ತಡಿ ಹಿರಿಯ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರ 210ರಲ್ಲಿ ಮತ ಹಾಕಲು ಹೋಗುವ ಮುನ್ನ ಇಲ್ಲಿನ ನಿವಾಸಿ ಅಬ್ದುಲ್‌ ಖಾದರ್‌ ಎಂಬವರಿಗೆ ಮತಚೀಟಿ ನೀಡಲಾಗಿದೆ. ಆದರೆ ಚೀಟಿ ನೋಡಿದ ಅಬ್ದುಲ್‌ ಖಾದರ್‌ ಅವರಿಗೆ ಶಾಕ್‌ ಆಗಿದೆ. ಅಬ್ದುಲ್‌ ಖಾದರ್‌ ಎಂದು ಬರೆಯುವ ಬದಲು ‘ಅಬ್ದುಲ್ ನಾಯಿ’ ಎಂದು ಬರೆಯಲಾಗಿದೆ. ಇದೇ ಚೀಟಿ ಹಿಡಿದು ಅಬ್ದುಲ್‌ ಖಾದರ್‌ ಮತದಾನ ಮಾಡಿದರೂ ನಮ್ಮವರ ಕನ್ನಡ ಜ್ಞಾನದ ಬಗ್ಗೆ ಇತರ ಮತದಾರರಲ್ಲಿ ಅಸಹನೆ ಕಂಡುಬಂದಿದೆ. ಅಬ್ದುಲ್‌ ಖಾದರ್‌ ಬದಲಿಗೆ ಅಬ್ದುಲ್‌ ನಾಯಿ ಎಂದು ಬರೆದ ತಪ್ಪಿಗಷ್ಟೇ ಇದು ಸೀಮಿತವಾಗಿಲ್ಲ. ಗ್ರಾಮದ ಹೆಸರನ್ನು ನೆಟ್ಟಣಿಗೆ ಮುಳ್ಳೂರು ಎಂದು ಬರೆಯಲಾಗಿದೆ. ಇನ್ನು 184 ಅಂಗನವಾಡಿ ಕೇಂದ್ರ ಮಜ್ಜಾರಡ್ಕ ಅರಿಯಡ್ಕ ಗ್ರಾಮದ ಮತದಾರರ ಮೂಲ ಹೆಸರಿನ ಬದಲು ಪಂಕಪ್ಪ, ಬಂಟ್ವಾಳದ 127ನೇ ಮತಗಟ್ಟೆ ಕೇಂದ್ರ ಕಾರ್ಮೆಲ್‌ ಸಂಯುಕ್ತ ಪದವಿ ಪೂರ್ವ ಕಾಲೇಜು ಮೊಡಂಕಾಪು ಪೂರ್ವಭಾಗ ಇಲ್ಲಿನ ಮತದಾರರೊಬ್ಬರ ಹೆಸರನ್ನು ಮಹಮ್ಮದ್‌ ಇಸುಬು ಪ್ರಾಣೇಶ್‌ ಎಂದು ಬರೆಯಲಾಗಿದೆ. ಇಂತಹ ನೂರಾರು ತಪ್ಪುಗಳಿದ್ದು, ಕೆಲವನ್ನಷ್ಟೇ ಹೇಳಲಾಗಿದೆ. ಕನ್ನಡ ಕನ್ನಡ ಎಂದು ಬೊಬ್ಬಿಡುವವರ ನಡುವೆ ಕನ್ನಡ ತಿಳಿಯದ ನಮ್ಮ ಮುದ್ರಾರಾಕ್ಷಸರಿಗೆ ಗಂಟೆ ಕಟ್ಟುವವರು ಯಾರೂ ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ.

 

LEAVE A REPLY

Please enter your comment!
Please enter your name here