ಮಂಗಳೂರು(ಬೆಂಗಳೂರು): ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಅವರ ಮಗ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜೀವ ಭಯ ಇರುವದರಿಂದ ದೂರು ದಾಖಲಿಸಲು ವಿಳಂಬವಾಗಿದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಎಚ್.ಡಿ. ರೇವಣ್ಣ ಎರಡನೇ ಆರೋಪಿಯಾಗಿ ಪ್ರಜ್ವಲ್ ರೇವಣ್ಣ ಇದ್ದಾರೆ. ದೂರುದಾರ ಮಹಿಳೆ ರೇವಣ್ಣ ಅವರ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ, ಭವಾನಿ ರೇವಣ್ಣ ಸೋದರತ್ತೆ ಮಗಳಾಗಿದ್ದಾರೆ. ಸಂತ್ರಸ್ತೆ 2015ರಲ್ಲಿ ರೇವಣ್ಣ ಸೂಚನೆಯ ಮೇರೆಗೆ ಹಾಸ್ಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ನಾಲ್ಕು ವರ್ಷಗಳ ನಂತರ ಸೂರಜ್ ರೇವಣ್ಣನ ಮದುವೆ ಸಂದರ್ಭದಲ್ಲಿ ಕೆಲಸಕ್ಕಾಗಿ ಮನೆಗೆ ಕರೆಸಿಕೊಳ್ಳಲಾಯ್ತು. ಅಲ್ಲಿ ಸಂತ್ರಸ್ತೆ ಮೂರು ವರ್ಷ ಕೆಲಸ ಮಾಡಿದ್ದರು. ಇದಾದ ಬಳಿಕ ನಾಲ್ಕು ತಿಂಗಳ ನಂತರ ರೇವಣ್ಣ ಕೊಠಡಿಗೆ ಬರುವಂತೆ ಕರೆಯುತ್ತಿದ್ದರು ಎಂದು ಎಫ್ಐಆರ್ ನಲ್ಲಿ ದಾಖಲಾಗಿದೆ. ಮನೆಯಲ್ಲಿ ಆರು ಜನ ಮಹಿಳೆಯರು ಕೆಲಸ ಮಾಡುತ್ತಿದ್ದು, ಪ್ರಜ್ವಲ್ ರೇವಣ್ಣ ಬಂದ್ರೆ ಭಯ ಆಗುತ್ತೆ ಎಂದು ಹೇಳುತ್ತಿದ್ದರು. ಇಷ್ಟು ಮಾತ್ರವಲ್ಲದೇ ಅಲ್ಲಿ ಕೆಲಸ ಮಾಡುತ್ತಿದ್ದ ಹುಡುಗರು ಮಹಿಳೆಯರಿಗೆ ಎಚ್ಚರವಾಗಿರುವಂತೆ ಸೂಚಿಸುತ್ತಿದ್ದರು. ಭವಾನಿ ಮನೆಯಲ್ಲಿ ಇಲ್ಲದಿದ್ದಾಗ ರೇವಣ್ಣ ಸ್ಟೋರ್ ರೂಮ್ನಲ್ಲಿ ಕೈ ಹಿಡಿದು ಎಳೆಯುತ್ತಿದ್ದರು ಎಂದಿದ್ದಾರೆ.
ಇನ್ನೊಂದೆಡೆ ಲೈಂಗಿಕ ಹಗರಣ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡುವವರ ಗೌಪ್ಯತೆ ಕಾಪಾಡಲಾಗುವುದು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಹೇಳಿದ್ದಾರೆ. ಒಬ್ಬ ಸಂತ್ರಸ್ತೆ ಬಂದು ದೂರು ದಾಖಲು ಮಾಡಿದ್ದಾರೆ. ಲೈಂಗಿಕ ದೌರ್ಜನ್ಯ ಮತ್ತು ಬೆದರಿಕೆ ಹಾಕಿದ್ದಾರೆ ಅಂತ ದೂರು ಕೊಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ಮತ್ತು ರೇವಣ್ಣ ಅವರ ಮೇಲೆ ದೂರು ದಾಖಲಿಸಿದ್ದಾರೆ. ಎಸ್ಐಟಿ ಗೆ ಎಲ್ಲ ದಾಖಲೆಗಳನ್ನು ನಾವು ನೀಡುತ್ತೇವೆ. ಯಾರೇ ಬಂದು ದೂರು ಕೊಟ್ಟರು ಅವರ ಬಗ್ಗೆ ಗೌಪ್ಯತೆ ಕಾಪಾಡುತ್ತೇವೆ. ಸರ್ಕಾರ ಈಗಾಗಲೇ ಅವರಿಗೆ ರಕ್ಷಣೆ ಕೊಡುವುದಾಗಿ ತಿಳಿಸಿದೆ ಎಂದು ಅವರು ಹೇಳಿದ್ದಾರೆ. ಸಾರ್ವಜನಿಕರು ಕೂಡ ಆ ವಿಡಿಯೋಗಳನ್ನು ವೈರಲ್ ಮಾಡುವ ಕೆಲಸ ಮಾಡಬಾರದು. ಸಂತ್ರಸ್ತ ಮಹಿಳೆಯರು ಧೈರ್ಯದಿಂದ ಬಂದು ದೂರು ದಾಖಲು ಮಾಡಬೇಕು. ಯಾರೇ ಬಂದು ದೂರು ದಾಖಲು ಮಾಡಿದ್ರು ನಾವು ನಿಮ್ಮ ಗೌಪ್ಯತೆ ಕಾಪಾಡುತ್ತೇವೆ ಎಂದು ಅವರು ಹೇಳಿದ್ದಾರೆ.