ವಸತಿ ಸಂಕೀರ್ಣದ ಸನ್‌ ಶೇಡ್‌ ಛಾವಣಿಯಲ್ಲಿ ಸಿಲುಕಿದ್ದ ಮಗು-ಸ್ಥಳೀಯ ನಿವಾಸಿಗಳಿಂದ ಮಗುವಿನ ರಕ್ಷಣೆ-ವಿಡಿಯೋ ವೈರಲ್

ಮಂಗಳೂರು(ಚೆನ್ನೈ): ಚೆನ್ನೈ ನಗರದ ಅವದಿ ಪ್ರದೇಶದ ವಸತಿ ಸಂಕೀರ್ಣ ಕಟ್ಟಡದ ನಾಲ್ಕನೇ ಅಂತಸ್ತಿನಿಂದ ಎರಡನೇ ಅಂತಸ್ತಿನ ಸನ್‌-ಶೇಡ್‌ ಮೇಲೆ ಬಿದ್ದ ಎಂಟು ತಿಂಗಳ ಮಗುವನ್ನು ರಕ್ಷಿಸಿದ ವೀಡಿಯೋ ವೈರಲ್‌ ಆಗಿದೆ.

ಅದೇ ಕಟ್ಟಡದ ನಿವಾಸಿಯೊಬ್ಬರು ಸೆರೆಹಿಡಿದ ವೀಡಿಯೋದಲ್ಲಿ ಮಗು ಹರಿನ್‌ ಎರಡನೇ ಅಂತಸ್ತಿನ ಸನ್‌ ಶೇಡ್‌ ಛಾವಣಿಯ ತುದಿಯಲ್ಲಿ ಬಿದ್ದಿರುವುದು ಕಾಣಿಸುತ್ತದೆ. ಅಕ್ಕಪಕ್ಕದ ನಿವಾಸಿಗಳು ಭಯಭೀತರಾಗಿ ಚೀರಾಡುತ್ತಿದ್ದಂತೆಯೇ ಮೂವರು ವ್ಯಕ್ತಿಗಳು ಮೊದಲ ಮಹಡಿಯ ಕಿಟಿಕಿಯಿಂದ ಮಗುವನ್ನು ರಕ್ಷಿಸಲು ಯತ್ನಿಸುತ್ತಿರುವುದು ಹಾಗೂ ಇನ್ನೂ ಕೆಲ ಜನರು ಕೆಳಗೆ ಬೆಡ್‌ ಶೀಟ್‌ ಹರಡಿ ಹಿಡಿದುಕೊಂಡಿರುವುದು ವೀಡಿಯೋದಲ್ಲಿದೆ. ಅಂತಿಮವಾಗಿ ಮೊದಲ ಮಹಡಿಯ ಕಿಟಿಕಿಯಿಂದ ಮಗುವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ಮೂವರಲ್ಲಿ ಒಬ್ಬ ಮಗುವನ್ನು ಹಿಡಿದು ಇನ್ನೊಬ್ಬನಿಗೆ ಮಗುವನ್ನು ಹಸ್ತಾಂತರಿಸಿದಾಗ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇನ್ನೇನಾಗುತ್ತದೋ ಎಂಬ ಆತಂಕದಲ್ಲಿ ತುದಿಗಾಲಲ್ಲಿ ನಿಂತು ನೋಡುವಂತೆ ಮಾಡುವ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅವದಿ ಪ್ರದೇಶದ ವಿಜಿಎನ್‌ ಸ್ಟಾಫೊರ್ಡ್‌ ಸಂಕೀರ್ಣದಲ್ಲಿ ಘಟನೆ ಸಂಭವಿಸಿದೆ. ಮಗುವಿಗೆ ಯಾವುದೇ ಸಮಸ್ಯೆಯಾಗಿಲ್ಲ. ಇಲ್ಲಿಯ ತನಕ ಯಾರೂ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here