ಅಶ್ಲೀಲ ವಿಡಿಯೋ ಪೆನ್​ಡ್ರೈವ್ ಬಹಿರಂಗಕ್ಕೆ ಬಿಗ್ ಟ್ವಿಸ್ಟ್-ದೇವರಾಜೇಗೌಡಗಷ್ಟೇ ಕೊಟ್ಟಿದ್ದೆ ಎಂದ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್

ಮಂಗಳೂರು(ಹಾಸನ): ಹಾಸನ ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳುಳ್ಳ ಪೆನ್​ಡ್ರೈವ್ ಬಹಿರಂಗ ವಿಚಾರಕ್ಕೆ ದೊಡ್ಡ ಟ್ವಿಸ್ಟ್ ದೊರೆತಿದೆ. ​ಪೆನ್​ಡ್ರೈವನ್ನು ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೆಗೌಡಗೆ ಬಿಟ್ಟು ಬೇರೆ ಯಾರಿಗೂ ನೀಡಿಲ್ಲ ಎಂದು ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್ ಹೇಳಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹರಿದಾಡಿದ ಮಹಿಳೆಯರ ಅಶ್ಲೀಲ ವಿಡಿಯೋ ಉಳ್ಳ ಪೆನ್​ಡ್ರೈವನ್ನು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಸಂಸದ ಡಿಕೆ ಸುರೇಶ್​ಗೆ ಕಾರ್ತಿಕ್ ನೀಡಿದ್ದ. ನಂತರ ನನಗೆ ನೀಡಿದ್ದ ಎಂದು ದೇವರಾಜೇಗೌಡ ಸೋಮವಾರ ‘ಟಿವಿ9’ಗೆ ತಿಳಿಸಿದ್ದರು. ಇದರ ಬೆನ್ನಲ್ಲೇ ಕಾರ್ತಿಕ್ ಆ ಬಗ್ಗೆ ಸ್ಪಷ್ಟನೆ ನೀಡಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ನಾನು ರೇವಣ್ಣ ಹಾಗೂ ಪ್ರಜ್ವಲ್ ಜೊತೆ ಹದಿನೈದು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದೆ. ವರ್ಷದ ಹಿಂದೆ ನಾನು ಕೆಲಸ ಬಿಟ್ಟಿದ್ದೇನೆ. ನನ್ನ ಮೇಲೆ ಮಾಡಿದ ದೌರ್ಜನ್ಯ, ನಮ್ಮ ಜಮೀನು ಬರೆಸಿಕೊಂಡಿದ್ದು, ಹೆಂಡತಿ ಮೇಲೆ ಹಲ್ಲೆ ಮಾಡಿದ್ದ ವಿಚಾರವಾಗಿ ನಾನು ಅವರ ಮನೆಯಿಂದ ಹೊರಗೆ ಬಂದೆ. ನಾನು ಅವರ ವಿರುದ್ಧ ಕೇಸ್ ದಾಖಲಿಸಿ ಹೋರಾಟ ಮಾಡುವ ತಯಾರಿಯಲ್ಲಿ ಇದ್ದೆ. ಆಗ ಅವರ ವಿರುದ್ಧ ಹೋರಾಟ ಮಾಡುತ್ತಿದ್ದ ಬಿಜೆಪಿ ಮುಖಂಡ ದೇವರಾಜೇಗೌಡ ಬಗ್ಗೆ ವಿಚಾರ ಗೊತ್ತಾಗಿ ಅವರ ಬಳಿ ಕಷ್ಟ ಹೇಳಿಕೊಂಡಿದ್ದೆ. ಆಗ, ಅನ್ಯಾಯಕ್ಕೆ ನ್ಯಾಯ ಒದಗಿಸಿ ಕೊಡುವ ಭರವಸೆ ನೀಡಿದ್ದರು. ಆದರೆ, ಅವರು ಕೇಸ್ ತಗೊಳ್ಳಲಿಲ್ಲ. ಹಾಗಾಗಿ ನಾನು ಬೇರೆ ಲಾಯರ್ ಮೂಲಕ ಕೇಸ್ ಹಾಕಿಸಿದೆ. ಆಗ ಮತ್ತೆ ನನ್ನನ್ನು ಕರೆಸಿ, ಕೋರ್ಟ್ ಹೋರಾಟ ಮಾಡಿದರೆ ನಿನಗೆ ನ್ಯಾಯ ಸಿಗಲ್ಲ. ಜನರಿಗೆ ಗೊತ್ತಾಗಬೇಕು ಎಂದರು. ಎಲ್ಲಾ ಮಾದ್ಯಮಗಳ ಎದುರು ಹೇಳಿಕೆ ಕೊಡಿಸಿದರು. ಆಗ ಅವರೇ ನನ್ನ ಜೊತೆ ನಿಂತು ಅವರೇ ಹೇಳಿಕೆ ಕೊಟ್ಟಿದ್ದರು’ ಎಂದು ಕಾರ್ತಿಕ್ ಹೇಳಿದ್ದಾರೆ. ಇದೆಲ್ಲ ಆದ ಬಳಿಕ ಪ್ರಜ್ವಲ್ ರೇವಣ್ಣ ನನ್ನ ವಿರುದ್ಧ ಸ್ಟೇ ತಂದರು. ಯಾವುದೆ ವೀಡಿಯೋ ಬಿಡುಗಡೆ ಮಾಡದಂತೆ ಸ್ಟೇ ತಂದಿದ್ದರು. ಆಗ ಆ ತಡೆಯಾಜ್ಞೆ ಪ್ರತಿಯನ್ನು ತೆಗೆದುಕೊಂಡು ನಾನು ದೇವರಾಜೇಗೌಡ ಬಳಿ ಹೋದೆ. ಆಗ ಅವರು, ‘ನಿನ್ನ ಬಳಿ ಏನೊ ವೀಡಿಯೋ, ಫೋಟೊ ಇದೆಯಂತೆ, ಹಾಗಾಗಿ ತಡೆಯಾಜ್ಞೆ’ ತಂದಿದ್ದಾರೆ ಎಂದರು.

ನನ್ನ ಬಳಿ ಏನು ವೀಡಿಯೋ ಇದೆ? ಅದನ್ನು ಅವರಿಗೆ ಯಾರು ಹೇಳಿದರು ಎಂದು ದೇವರಾಜೇಗೌಡರನ್ನು ಪ್ರಶ್ನಿಸಿದೆ. ಅದಕ್ಕವರು, ನಿನ್ನ ಬಳಿ ಇರುವ ಫೋಟೊ ಹಾಗೂ ವೀಡಿಯೊ ನನಗೆ ಕೊಡು ಎಂದರು. ಯಾರಿಗೂ ತೋರಿಸಲ್ಲ, ಜಡ್ಜ್ ಮುಂದೆ ಪ್ರಸ್ತುತಪಡಿಸುತ್ತೇನೆ. ತಡೆಯಾಜ್ಞೆ ತೆರವು ಮಾಡಿಸಿಕೊಡುತ್ತೇನೆ ಎಂದಿದ್ದರು. ಅವರನ್ನು ನಂಬಿ ನನ್ನ ಬಳಿ ಇದ್ದ ಒಂದು ಕಾಪಿಯನ್ನು ಅವರಿಗೆ ಕೊಟ್ಟಿದ್ದೆ. ಅದನ್ನು ಅವರು ಸ್ವಾರ್ಥಕ್ಕೆ ಬಳಸಿಕೊಂಡರು. ನಾನು ಅದನ್ನು ಕೊಟ್ಟು ವಕಾಲತ್ ಪತ್ರಕ್ಕೆ ಸಹಿ ಮಾಡಿ ಬಂದಿದ್ದೆ ಎಂದು ಕಾರ್ತಿಕ್ ತಿಳಿಸಿದ್ದಾರೆ. ದೇವರಾಜೇಗೌಡರು ತಿಂಗಳಾದರೂ ಕೂಡ ಕೇಸ್ ಮೂವ್ ಮಾಡಿರಲಿಲ್ಲ. ಆ ಬಗ್ಗೆ ವಿಚಾರಿಸಿದಾಗ, ಈಗ ಮಾಡೋಕೆ ಆಗಲ್ಲ ಸ್ವಲ್ಪ ದಿನ ಇರು, ಮುಂದೆ ನೋಡೋಣ ಎಂದಿದ್ದರು. ಅಲ್ಲಿಂದ ನಾನು ಸುಮ್ಮನಾದೆ. ಕೊಟ್ಟ ವೀಡಿಯೋ ವಾಪಸ್ ಕೇಳಿದ್ದಕ್ಕೆ, ನನ್ನ ಬಳಿಯೇ ಇರಲಿ ಎಂದರು. ಆಗ ನಾನು ಸುಮ್ಮನಾದೆ ಎಂದು ಕಾರ್ತಿಕ್ ಹೇಳಿದ್ದಾರೆ.

ಇತ್ತೀಚೆಗೆ ಆರು ತಿಂಗಳ ಹಿಂದೆ ದೇವರಾಜೇಗೌಡ ಸುದ್ದಿಗೋಷ್ಠಿ ಮಾಡಿದ್ದರು. ಅವರ ಹಾಗು ರೇವಣ್ಣ ಕುಟುಂಬದ ಜಗಳ ನೆಪ ಮಾಡಿಕೊಂಡು, ಹಾಸನದ ಸರ್ಕಲ್​​​ನಲ್ಲಿ ರಾಸಲೀಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದರು. ಆಗ ನಾನು ಅವರ ಬಳಿ ಹೋಗಿ, ಯಾಕೆ ಹೀಗೆ ಮಾಡಿದ್ದೀರಿ ಎಂದು ಕೇಳಿದ್ದೆ. ಆಗ ಅವರು, ನಿನಗೂ ಇದಕ್ಕೂ ಸಂಬಂಧ ಇಲ್ಲ, ಸುಮ್ಮನಿರು ಎಂದಿದ್ದರು ಎಂದು ಕಾರ್ತಿಕ್ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಂತರ ಪ್ರಜ್ವಲ್​​ಗೆ ಟಿಕೆಟ್ ಕೊಡದಂತೆ ಬಿಜೆಪಿ ಹೈಕಮಾಂಡ್​​ಗೆ ದೇವರಾಜೇಗೌಡ ಪತ್ರ ಬರೆದಿದ್ದರು. ಅದರ ಕಾಪಿಯನ್ನು ನನಗೂ ಕಳುಹಿಸಿದ್ದರು. ಕೋರ್ಟ್​​ನಲ್ಲಿ ನ್ಯಾಯ ಸಿಗದಿದ್ದರೆ ಈ ರೀತಿ ಸಿಗುತ್ತದೆ ಎಂದಿದ್ದರು. ಹೇಗಾದರೂ ಸರಿ, ನ್ಯಾಯ ಸಿಗಲಿ ಎಂದು ನಾನು ಸುಮ್ಮನಿದ್ದೆ. ಆದರೆ, ನೆನ್ನೆ ಅವರು ಪತ್ರಿಕಾಗೋಷ್ಠಿಯಲ್ಲಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಪೆನ್​ಡ್ರೈವ್ ಅವರಿಗೆ ಕೊಡುವುದಕ್ಕೂ ಮುನ್ನ ಕಾಂಗ್ರೆಸ್ ಮುಖಂಡರಿಗೆ ಕೊಟ್ಟಿದ್ದೆ ಎಂದು ಸುಳ್ಳು ಆರೋಪ‌ ಮಾಡಿದ್ದಾರೆ. ಆದರೆ, ನಾನು ದೇವರಾಜೇಗೌಡ ಬಿಟ್ಟರೆ ಬೇರೆ ಯಾರಿಗೂ ಈ ಬಗ್ಗೆ ಪೆನ್ ಡ್ರೈ ವ್ ಕೊಟ್ಟಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here