ನಾಲ್ಕು ವರ್ಷಗಳ ಬಳಿಕ ಲಕ್ಷದ್ವೀಪ-ಮಂಗಳೂರು ಪ್ರಯಾಣಿಕರ ಹಡಗು ಆಗಮನ

ಮಂಗಳೂರು: ಕೋವಿಡ್-ಲಾಕ್‌ಡೌನ್ ಹಿನ್ನೆಲೆಯಲ್ಲಿ 2020ರಲ್ಲಿ ರದ್ದಾಗಿದ್ದ ಲಕ್ಷದ್ವೀಪ-ಮಂಗಳೂರು ಪ್ರಯಾಣಿಕರ ಹಡಗು ನಾಲ್ಕು ವರ್ಷದ ಬಳಿಕ ಗುರುವಾರ ಸಂಜೆ ನಗರದ ಹಳೆಯ ಬಂದರಿಗೆ ಆಗಮಿಸಿದೆ.

ಗುರುವಾರ ಬೆಳಗ್ಗೆ 7 ಗಂಟೆಗೆ ಲಕ್ಷದ್ವೀಪದ ಕದ್ಮತ್ ದ್ವೀಪದಿಂದ ಪ್ರಯಾಣ ಆರಂಭಿಸಿದ ಕೊಚ್ಚಿಯ ‘ಪರೊಲಿ’ ಎಂಬ ಹೆಸರಿನ ಹಡಗು ಅಲ್ಲಿನ ಮತ್ತೊಂದು ದ್ವೀಪಕ್ಕೆ ತಲುಪಿದೆ. ಬಳಿಕ ಅಲ್ಲಿಂದ 8:15ಕ್ಕೆ ಪ್ರಯಾಣ ಆರಂಭಿಸಿದ ಹಡಗು ಸಂಜೆ 4ಕ್ಕೆ ಮಂಗಳೂರು ಬಂದರು ಹೊರವಲಯಕ್ಕೆ ತಲುಪಿ ಲಂಗರು ಹಾಕಿತು. ಹಳೆಯ ಬಂದರ್‌ನಲ್ಲಿ ಹಡಗೊಂದು ಸರಕು ತುಂಬಿಸಿಕೊಳ್ಳುತ್ತಿದ್ದ ಕಾರಣ ಮಂಗಳೂರು ಹಳೆಯ ಬಂದರು ಪ್ರವೇಶಿಸಲು ‘ಪರೊಲಿ’ ಹಡಗು ಸಂಜೆ 4:30ರ ತನಕ ಕಾಯಬೇಕಾಯಿತು. ಕೊನೆಗೂ ಸಂಜೆ ಸುಮಾರು 4:45ಕ್ಕೆ ಹಳೆಯ ಬಂದರು ತಲುಪಿದೆ. ಈ ಹಡಗು ಶನಿವಾರ ಮುಂಜಾನೆ ಮರಳಿ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಲಿದೆ.

ಈ ಹಡಗಿನಲ್ಲಿ 160 ಪ್ರಯಾಣಿಕರು, ಓರ್ವ ಪೈಲೆಟ್, ಓರ್ವ ಚೀಫ್ ಇಂಜಿನಿಯರ್, ಓರ್ವ ಸಹ ಇಂಜಿನಿಯರ್, ಎಂಟು ಮಂದಿ ಕಾರ್ಮಿಕರಿದ್ದರು. ಮಾಜಿ ಶಾಸಕ ಜೆ.ಆರ್.ಲೋಬೊ ಮತ್ತಿತರರು ಪ್ರಯಾಣಿಕರನ್ನು ಬರಮಾಡಿಕೊಂಡರು. ಹಿಂದೆ ಮಂಗಳೂರು-ಲಕ್ಷದ್ವೀಪ ನಡುವೆ ಸಂಚರಿಸುತ್ತಿದ್ದ ದೊಡ್ಡ ಹಡಗಿನ ಪ್ರಯಾಣದ ಅವಧಿ 13 ಗಂಟೆಯಾಗಿತ್ತು. ಆದರೆ ಈ ಹೊಸ ಹಡಗಿನ ಪ್ರಯಾಣದ ಅವಧಿ ಕೇವಲ 7 ಗಂಟೆಯಾಗಿರುತ್ತದೆ. 7 ವರ್ಷದ ಹಿಂದೆ ಹೈಸ್ಪೀಡ್ ಹಡಗು ಲಕ್ಷದ್ವೀಪ ಮತ್ತು ಮಂಗಳೂರು ಸಂಚರಿಸುತ್ತಿತ್ತು. ಇದೀಗ ಮತ್ತೊಮ್ಮೆ ಹೈಸ್ಪೀಡ್ ಹಡಗು ಲಕ್ಷದ್ವೀಪ ಮತ್ತು ಮಂಗಳೂರು ನಡುವೆ ಪ್ರಯಾಣ ಆರಂಭಿಸಿದೆ.

LEAVE A REPLY

Please enter your comment!
Please enter your name here