ಮಂಗಳೂರು (ತಿರುವನಂತಪುರ): ಹೆಚ್ಚುತ್ತಿರುವ ಬಿಸಿಗಾಳಿ ಹಿನ್ನೆಲೆಯಲ್ಲಿ ಕೇರಳ ಸರಕಾರವು ಮೇ.6ರವರೆಗೆ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದೆ. ಬಿಸಿ ಗಾಳಿ ಸಮಸ್ಯೆಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಿದ್ದಾರೆ.
ಆಂಧ್ರದಲ್ಲಿ 46.2 ಡಿಗ್ರಿ ತಾಪ: ಆಂಧ್ರ ಪ್ರದೇಶದ ರೆಂಟಚಿಂತಲದಲ್ಲಿ 46.2 ಡಿ. ಸೆ. ತಾಪಮಾನ ದಾಖಲಾಗಿದ್ದು, ಪೂರ್ವ, ದಕ್ಷಿಣ ಮತ್ತು ಈಶಾನ್ಯ. ಭಾರತದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಹವಾಮಾನ ಇಲಾಖೆಯು ಆಂಧ್ರ, ಬಿಹಾರ, ಪಶ್ಚಿಮ ಬಂಗಾಲ ಮತ್ತು ಒಡಿಶಾಗೆ ಆರೆಂಜ್ ಅಲರ್ಟ್ ಘೋಷಿಸಿದೆ. ‘ಕರ್ನಾಟಕ, ತೆಲಂಗಾಣಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇನ್ನೂ ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ಕಾಸರಗೋಡಿನಲ್ಲಿ ಉಷ್ಣ ಅಲೆಯೂ ಬೀಸತೊಡಗಿದೆ. ಜಿಲ್ಲೆಯಲ್ಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಉಷ್ಣ ಅಲೆಯ ಪರಿಣಾಮ ಎಂದು ಶಂಕಿಸಲಾಗಿದೆ. ಕರ್ನಾಟಕದ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಶಿರಿಬಿದಿಗೆ ಚಂದ್ರಪ್ಪ ಅವರ ಪುತ್ರ ರುದ್ರಪ್ಪ ಲಮಾನಿ (45) ಮೃತಪಟ್ಟವರು. ಅವರು ಕಾಸರಗೋಡಿನಲ್ಲಿ 9 ವರ್ಷದಿಂದ ನಿರ್ಮಾಣ ಕಾರ್ಮಿಕನಾಗಿ ದುಡಿಯುತ್ತಿದ್ದರು. ಜೆ.ಪಿ. ಕಾಲನಿಯ ಖಾಸಗಿ ವಸತಿಗೃಹದಲ್ಲಿ ನೆಲೆಸಿದ್ದರು. ಮನೆ ಬಳಿಯ ರಸ್ತೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಕಂಡುಬಂದ ಅವರನ್ನು ಸ್ಥಳೀಯರು ಜನರಲ್ ಆಸ್ಪತ್ರೆಗೆ ದಾಖಲಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಮರಣೋತ್ತರ ವರದಿ ಲಭಿಸಿದ ಬಳಿಕವಷ್ಟೇ ಸಾವಿನ ಸ್ಪಷ್ಟ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.