ಮಂಗಳೂರು (ಮುಂಬೈ): ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಟಾರ್ಚ್ ಲೈಟ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ ವೇಳೆ ಗರ್ಭಿಣಿ ಹಾಗೂ ಆಕೆಯ ಮಗು ಮೃತಪಟ್ಟಿರುವ ಅಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈ ಮಹಾನಗರ ಪಾಲಿಕೆಯ ಸುಸ್ಮಾ ಸ್ವರಾಜ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಹೆರಿಗೆಗೆ ದಾಖಲಾಗಿದ್ದ ಕೌಸರುದ್ದೀನ್ ಅನ್ಸಾರಿ ಅವರ ಪತ್ನಿ ಸಾಹಿದುನ್ ಮೃತಪಟ್ಟವರು.
ಸಾಹಿದುನ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ನಂತರ ವೈದ್ಯರು ಸಾಮಾನ್ಯ ಹೆರಿಗೆ ಮಾಡಿಸುವುದಾಗಿ ಹೇಳಿದ್ದರು. ಆದರೆ ಗುರುವಾರ ಸಂಜೆವರೆಗೂ ಕಾದು ಸಿಸೇರಿಯನ್ ಹೆರಿಗೆ ಮಾಡಿಸಲು ಮುಂದಾಗಿದ್ದರು. ಆದರೆ ಈ ವೇಳೆ ವಿದ್ಯುತ್ ಕೈಕೊಟ್ಟಿದ್ದು, ಟಾರ್ಚ್ ಲೈಟ್ ಬೆಳಕಲ್ಲಿಯೇ ಸಿಸೇರಿಯನ್ ಮಾಡಲಾಗಿತ್ತು. ಇದರಿಂದ ನನ್ನ ಪತ್ನಿ ಮಗು ಮೃತಪಟ್ಟಿದೆ ಎಂದು ಅನ್ಸಾರಿ ಆರೋಪಿಸಿದ್ದಾರೆ. ಘಟನೆ ಸಂಬಂಧ ತಡರಾತ್ರಿ ಅನ್ಸಾರಿ ಸಂಬಂಧಿಕರು ಮುಂಬೈ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಕೌಸರುದ್ದೀನ್ ಅಂಗವಿಕಲರಾಗಿದ್ದು, ಕಳೆದ 11 ತಿಂಗಳ ಹಿಂದೆ ಅವರ ವಿವಾಹವಾಗಿತ್ತು.